ADVERTISEMENT

ಪ್ರಿಯಾಂಕಾ ಗಾಂಧಿ ವಯನಾಡ್‌ನಲ್ಲೇ ಉಳಿಯುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ: LDF

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2024, 10:15 IST
Last Updated 19 ಅಕ್ಟೋಬರ್ 2024, 10:15 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   

ವಯನಾಡ್ (ಕೇರಳ): ವಯನಾಡ್ ಲೋಕಸಭಾ ಉಪಚುನಾವಣೆಯ ಪ್ರಚಾರ ದಿನದಿಂದ ದಿನಕ್ಕೆ ಬಿರುಸು ಪಡೆದುಕೊಳ್ಳುತ್ತಿದೆ. ಎಲ್‌ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೇರಿ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಕ್ಷೇತ್ರವನ್ನು ಬಿಟ್ಟು ಹೋದರು. ಇದೀಗ ಅವರ ಸಹೋದರಿ ಪ್ರಿಯಾಂಕಾ ಗಾಂಧಿಯವರು ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದ ಮೇಲೆ ಕ್ಷೇತ್ರದಲ್ಲಿ ಇರುತ್ತಾರೋ ಅಥವಾ ಬಿಟ್ಟು ಹೋಗುತ್ತಾರೋ ಕಾದು ನೋಡೋಣ’ ಎಂದು ವ್ಯಂಗ್ಯವಾಡಿದ್ದಾರೆ.

‘ರಾಹುಲ್ ಗಾಂಧಿ ಯಾವ ನಿಲುವು ತಳೆದಿದ್ದಾರೆ ಎಂಬುದನ್ನು ಮತದಾರರು ಅರ್ಥಮಾಡಿಕೊಳ್ಳಬೇಕು. ಅವರು (ರಾಹುಲ್) ಚುನಾವಣೆಯಲ್ಲಿ ಗೆದ್ದ ಬಳಿಕ ಪುನಃ ಕ್ಷೇತ್ರದತ್ತ ತಿರುಗಿ ನೋಡಿರಲಿಲ್ಲ. ಹೀಗೆ ಬಂದು ಹೋಗುವವರಿಂದ ಕ್ಷೇತ್ರದ ಅಭಿವೃದ್ಧಿ ಹಾಗೂ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ’ ಎಂದು ಮೊಕೇರಿ ಗುಡುಗಿದ್ದಾರೆ.

ADVERTISEMENT

ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರಿಯಾಂಕಾ ಅವರು ವಯನಾಡ್‌ನಲ್ಲೇ ಉಳಿಯುತ್ತಾರೆ ಎಂಬುದಕ್ಕೆ ಏನು ಖಾತರಿ ಇದೆ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಎಡ ಶಕ್ತಿಗಳು ಪ್ರಬಲವಾಗಿರುವ ಮತ್ತು ಫ್ಯಾಸಿಸ್ಟ್ ಗುಂಪುಗಳು ದುರ್ಬಲವಾಗಿರುವ ವಯನಾಡ್‌ ಕ್ಷೇತ್ರದಲ್ಲಿ ಏಕೆ ಸ್ಪರ್ಧಿಸುತ್ತಿದ್ದಾರೆ ಎಂಬುದಕ್ಕೆ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಮೈತ್ರಿಕೂಟದ ನಾಯಕರ ಬಳಿ ಉತ್ತರವಿಲ್ಲ ಎಂದು ಮೊಕೇರಿ

2014ರಲ್ಲಿ ವಯನಾಡ್‌ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೊಕೇರಿ, ಕಾಂಗ್ರೆಸ್ ಅಭ್ಯರ್ಥಿ ಎಂ.ಐ. ಶಾನವಾಸ್ ಅವರಿಗೆ ಪ್ರಬಲ ಪೈಪೋಟಿ ಒಡ್ಡಿದ್ದರು. ಇದೀಗ ಎರಡು ದಿನಗಳ ಹಿಂದಷ್ಟೇ ಹಿರಿಯ ಸಿಪಿಐ ಮುಖಂಡರೂ ಆಗಿರುವ ಮೊಕೇರಿಗೆ ಮತ್ತೊಮ್ಮೆ ಟಿಕೆಟ್‌ ನೀಡಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ರಾಯಬರೇಲಿ ಮತ್ತು ಕೇರಳದ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.

ರಾಹುಲ್‌ ಅವರು ರಾಯಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ವಯನಾಡ್‌ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ.

ಸಕ್ರಿಯ ರಾಜಕೀಯ ಪ್ರವೇಶಿಸಿದ ಐದು ವರ್ಷಗಳ ಬಳಿಕ ಪ್ರಿಯಾಂಕಾ ಅವರಿಗೆ ಚುನಾವಣಾ ಅಖಾಡ ಪ್ರವೇಶಿಸಲು ವೇದಿಕೆ ಸಜ್ಜಾದಂತಾಗಿದೆ. ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಆಯ್ಕೆಯಾದರೆ, ಮೊದಲ ಬಾರಿಗೆ ಅವರು ಸಂಸತ್‌ ಪ್ರವೇಶಿಸಿದಂತೆ ಆಗುತ್ತದೆ. ಅಲ್ಲದೆ ಗಾಂಧಿ ಕುಟುಂಬದ ಮೂವರು (ಸೋನಿಯಾ, ರಾಹುಲ್‌, ಪ್ರಿಯಾಂಕಾ) ಸಂಸತ್ತಿನಲ್ಲಿ ಇದ್ದಂತಾಗುತ್ತದೆ.

ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13ರಂದು ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.