ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮ್ಮ 63 ದಿನಗಳ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಮುಂಬೈ ಕೇಂದ್ರ ಭಾಗದಲ್ಲಿರುವ ಚೈತ್ಯಭೂಮಿ ಸ್ಮಾರಕದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿ ಅಂತಿಮಗೊಳಿಸಿದರು.
ಈ ಸಂದರ್ಭದಲ್ಲಿ ರಾಹುಲ್ ಅವರೊಂದಿಗೆ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಇದ್ದರು.
ಇದಕ್ಕೂ ಪೂರ್ವದಲ್ಲಿ ದಾರಾವಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿ ನಡೆಸುವುದು ಮತ್ತು ಪ್ರತಿ ವರ್ಷ ಬಡ ಮಹಿಳೆಯರ ಖಾತೆಗೆ ₹1 ಲಕ್ಷ ನಗದು ಜಮಾವಣೆ ಕುರಿತಂತೆ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಪುನರುಚ್ಚರಿಸಿದರು.
‘ದಾರಾವಿ ನಿಮ್ಮದು ಮತ್ತು ಸದಾ ನಿಮ್ಮದೇ ಆಗಿರಲಿದೆ. ನಿಮ್ಮ ಕೌಶಲಕ್ಕೆ ಬೆಲೆ ಸಿಗಲಿದೆ. ಈ ಸ್ಥಳವು ದೇಶದ ತಯಾರಿಕಾ ಕೇಂದ್ರವಾಗಬೇಕು’ ಎಂದು ಆಶಿಸಿದರು. ಜತೆಗೆ ಕೊಳಚೆ ಪ್ರದೇಶವಾದ ದಾರಾವಿಯ ಅಭಿವೃದ್ಧಿ ಹೊಣೆಯನ್ನು ಅದಾನಿ ಸಮೂಹಕ್ಕೆ ನೀಡಿರುವ ಕೇಂದ್ರದ ಕ್ರಮ ಕುರಿತು ತಮ್ಮ ಭಾಷಣದಲ್ಲಿ ಅವರು ಪ್ರಸ್ತಾಪಿಸಿದರು.
ಭಾರತ ಜೋಡೊ ನ್ಯಾಯ ಯಾತ್ರೆಯು ಜ. 14ರಂದು ಮಣಿಪುರದಿಂದ ಪ್ರಾರಂಭವಾಯಿತು. 63ನೇ ದಿನ ಮುಂಬೈನಲ್ಲಿ ಕೊನೆಗೊಂಡಿತು. ಭಾನುವಾರ ಬೆಳಿಗ್ಗೆ ‘ನ್ಯಾಯ ಸಂಕಲ್ಪ ಪಾದಯಾತ್ರೆ’ ಯನ್ನು ರಾಹುಲ್ ಗಾಂಧಿ ನಡೆಸಲಿದ್ದಾರೆ. ಇದು ಮಣಿ ಭವನದಿಂದ ಆರಂಭವಾಗಿ ಕ್ರಾಂತಿ ಮೈದಾನದವರೆಗೆ ನಡೆಯಲಿದೆ.
ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ತನ್ನ ಶಕ್ತಿ ಪ್ರದರ್ಶನವನ್ನು ಭಾನುವಾರ ನಡೆಸಲಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.