ನವದೆಹಲಿ: ‘ರಸ್ತೆಯಲ್ಲಿ ತಿಲಕ, ಮನೆಯಲ್ಲಿ ಮುಸ್ಲಿಮರ ಟೋಪಿ’ ಇದು ದೇಶದ ಪುರಾತನ ರಾಜಕೀಯ ಪಕ್ಷ ಕಾಂಗ್ರೆಸ್‌ನ ಹೊಸ ಚಹರೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೋತ್ರದ ವಿಷಯವನ್ನು ಬಿಜೆಪಿ ಮಂಗಳವಾರ ಈ ರೀತಿ ಲೇವಡಿ ಮಾಡಿದೆ.
ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಕಾಂಗ್ರೆಸ್ ಮತ್ತು ಆ ಪಕ್ಷದ ಅಧ್ಯಕ್ಷ ರಾಹುಲ್ ಗೊಂದಲದ ಸುಳಿಗೆ ಸಿಲುಕಿದ್ದಾರೆ ಎಂದು ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಕ್ವಿ ವ್ಯಂಗ್ಯವಾಡಿದ್ದಾರೆ. ‘ಕೋಮುವಾದಿ ಚೀಲದ ಮೇಲೆ ಜಾತ್ಯತೀತ ಹೊದಿಕೆ’ ಇದು ಕಾಂಗ್ರೆಸ್ ನಿಜಮುಖ ಮತ್ತು ಅಸ್ತಿತ್ವದ ಪ್ರಯತ್ನ ಎಂದು ಅವರು ವಿಶ್ಲೇಷಿಸಿದ್ದಾರೆ.
‘ರಾಹುಲ್ ಗಾಂಧಿ ಏನು ಹೇಳಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಿಲ್ಲ. ಒಟ್ಟಾರೆ ಈ ಬೆಳವಣಿಗೆ ವಿಪರ್ಯಾಸದ ಸಂಗತಿ’ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.
‘ನಾನೊಬ್ಬ ಅಪ್ಪಟ ಶಿವಭಕ್ತ. ಜನಿವಾರಧಾರಿ ಬ್ರಾಹ್ಮಣ’ ಎಂದು ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದರು. ‘ಹಾಗಾದರೆ ಕುಲ, ಗೋತ್ರ ಯಾವುದು’ ಎಂದು ಬಿಜೆಪಿಯ ಸಂಬಿತ್ ಪಾತ್ರಾ ಸವಾಲು ಹಾಕಿದ್ದರು. ಹೀಗಾಗಿ ರಾಹುಲ್ ಗೋತ್ರದ ವಿಷಯ ಇದೀಗ ರಾಜಕೀಯ ಮಹತ್ವ ಪಡೆದುಕೊಂಡಿದೆ.
ಕಾಶ್ಮೀರಿ ಬ್ರಾಹ್ಮಣ: ರಾಹುಲ್ ಗಾಂಧಿ ಕಾಶ್ಮೀರದ ಕೌಲ್ ಬ್ರಾಹ್ಮಣರಾಗಿದ್ದು, ದತ್ತಾತ್ರೇಯ ಗೋತ್ರಕ್ಕೆ ಸೇರಿದ್ದಾರೆ ಎಂದು ರಾಜಸ್ಥಾನದ ಪುಷ್ಕರ ನಗರದ ಬ್ರಹ್ಮ ದೇವಸ್ಥಾನದ ಅರ್ಚಕರು ಸೋಮವಾರ ಬಹಿರಂಗಪಡಿಸಿದ್ದರು.
ಪುಷ್ಕರ್ ಸರೋವರ ಘಾಟ್‌ನಲ್ಲಿ ನಡೆದ ಪೂಜೆಯ ಸಂದರ್ಭದಲ್ಲಿ ಸ್ವತಃ ರಾಹುಲ್ ತಮ್ಮದು ‘ದತ್ತಾತ್ರೇಯ ಗೋತ್ರ’ ಎಂದು ತಿಳಿಸಿದ್ದರು. ದೇವ
ಸ್ಥಾನದ ದಾಖಲೆ ಪುಸ್ತಕ (ಪೋಥಿ) ಮತ್ತು ನೆಹರೂ ಕುಟುಂಬದ ವಂಶವೃಕ್ಷ ದಾಖಲೆ ಪರೀಕ್ಷಿಸಿದಾಗ ಅವರು ಹೇಳಿದ್ದು ಸರಿಯಾಗಿತ್ತು ಎಂದು ಅರ್ಚಕರಾದ ದೀನಾನಾಥ್ ಕೌಲ್ ಮತ್ತು ರಾಜನಾಥ್ ಕೌಲ್ ಮಾಧ್ಯಮಗಳಿಗೆ ತಿಳಿಸಿದ್ದರು.
**
ಯಾರು ಈ ಕೌಲ್‌ಗಳು?
‘ದತ್ತಾತ್ರೇಯ ಎಂದರೆ ಕೌಲ್‌ಗಳು. ಕೌಲ್‌ಗಳೆಂದರೆ ಕಾಶ್ಮೀರಿ ಪಂಡಿತರು. ಬಹುತೇಕ ಕಾಶ್ಮೀರಿ ಪಂಡಿತರು ತಮ್ಮ ಹೆಸರಿನ ಮುಂದೆ ‘ಕೌಲ್’ ಎಂಬ ಅಡ್ಡ ಹೆಸರು ಸೇರಿಸಿಕೊಳ್ಳುವುದು ಸಾಮಾನ್ಯ’ ಎಂದು ಅರ್ಚಕರು ತಿಳಿಸಿದ್ದಾರೆ.
ಮೋತಿಲಾಲ್ ನೆಹರೂ, ಜವಾಹರ ಲಾಲ್ ನೆಹರೂ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮೇನಕಾ ಗಾಂಧಿ ಅವರು ಪುಷ್ಕರದ ಬ್ರಹ್ಮ ದೇವಸ್ಥಾನಕ್ಕೆ ಭೇಟಿ ನೀಡಿರುವುದು ದೇವಸ್ಥಾನದ ಸಂದರ್ಶಕರ ಪುಸ್ತಕದಲ್ಲಿ ನಮೂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.