ADVERTISEMENT

ಹಳಿಯಲ್ಲಿ ಮಲಗಿದ್ದವರ ಮೇಲೆ ಹರಿದ ಗೂಡ್ಸ್‌ ರೈಲು: 16 ಕಾರ್ಮಿಕರು ಬಲಿ

ನಡೆದೇ ಊರಿಗೆ ಹೊರಟಿದ್ದ ವಲಸಿಗರು

ಪಿಟಿಐ
Published 8 ಮೇ 2020, 21:07 IST
Last Updated 8 ಮೇ 2020, 21:07 IST
ದುರಂತ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು –ರಾಯಿಟರ್ಸ್‌ ಚಿತ್ರ
ದುರಂತ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು –ರಾಯಿಟರ್ಸ್‌ ಚಿತ್ರ   
""

ಔರಂಗಾಬಾದ್: ಕೊರೊನಾ ಸೋಂಕು ಪಸರಿಸುವಿಕೆ ತಡೆಗಾಗಿ ಹೇರಿರುವ ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರ ಸಂಕಷ್ಟದ ದುರಂತ ಮುಖವನ್ನು ಔರಂಗಾಬಾದ್‌ ಸಮೀಪ ಶುಕ್ರವಾರ ಬೆಳಿಗ್ಗೆ ನಡೆದ ಅವಘಡವು ತೆರೆದಿಟ್ಟಿದೆ.

ತಮ್ಮ ಊರಿಗೆ ಹೋಗಲು ನಡೆದು ನಡೆದು ದಣಿದು ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಗೂಡ್ಸ್‌ ರೈಲು ಹರಿದು 16 ಮಂದಿ ಮೃತಪಟ್ಟಿದ್ದಾರೆ. ಈ ವಲಸಿಗರ ಗುಂಪಿನಲ್ಲಿ ಒಟ್ಟು 20 ಜನರಿದ್ದರು. ಅವರಲ್ಲಿ ನಾಲ್ವರು ಬಚಾವಾಗಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್‌ನ ಕರ್ಮಾಡ್‌ ಸಮೀಪ ಬೆಳಗ್ಗೆ 5.15ಕ್ಕೆ ಈ ದುರ್ಘಟನೆ ನಡೆದಿದೆ.

ಹಳಿಯ ಸಮೀಪದಲ್ಲಿ ಮೃತದೇಹಗಳು ಮತ್ತು ಅವರ ಅಲ್ಪಸ್ವಲ್ಪ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದುದು ವಿಡಿಯೊ ದೃಶ್ಯವೊಂದರಲ್ಲಿ ದಾಖಲಾಗಿದೆ.

ADVERTISEMENT

ಜಲ್ನಾದಿಂದ ಮಧ್ಯಪ್ರದೇಶದ ಭೂಸಾವಲ್‌ ಎಂಬಲ್ಲಿಗೆ ಈ ಜನರು ನಡೆದು ಹೋಗುತ್ತಿದ್ದರು. ರೈಲು ಹಳಿಯಲ್ಲಿಯೇ ಅವರು ಅಲ್ಲಿವರೆಗೆ ನಡೆದು ಬಂದಿದ್ದರು.

ಉಕ್ಕು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದರು. ತಮ್ಮ ಊರಿಗೆ ತಲುಪುವುದಕ್ಕಾಗಿ ಅವರು ಗುರುವಾರ ರಾತ್ರಿ ನಡೆಯಲು ಆರಂಭಿಸಿದ್ದರು. ಊರಿಗೆ ಮರಳಲೇಬೇಕು ಎಂಬ ಹತಾಶೆಗೆ ಒಳಗಾಗಿದ್ದರು. ಪೊಲೀಸರ ಕಣ್ಣಿಗೆ ಬೀಳಬಾರದು ಎಂಬ ಕಾರಣಕ್ಕೆ ರೈಲು ಹಳಿ ಮೇಲೆಯೇ ಸಾಗಲು ತೀರ್ಮಾನಿಸಿದ್ದರು ಎಂದು ಪೊಲೀಸ್‌ ಅಧಿಕಾರಿ ಸಂತೋಷ್‌ ಖೇಟ್‌ಮಲಸ್‌ ಹೇಳಿದ್ದಾರೆ.

ನಾಲ್ವರು ಕಾರ್ಮಿಕರು ಹಳಿಯಿಂದ ಸ್ವಲ್ಪ ದೂರದಲ್ಲಿ ಮಲಗಿದ್ದರು. ಹಾಗಾಗಿ ಅವರು ಬದುಕಿ ಉಳಿದಿದ್ದಾರೆ.

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳು ಮೃತರ ಕುಟುಂಬಗಳಿಗೆ ಕ್ರಮವಾಗಿ ₹10 ಲಕ್ಷ ಮತ್ತು ₹5 ಲಕ್ಷ ಪರಿಹಾರ ಘೋಷಿಸಿವೆ.

ವಲಸಿಗರು ಊರಿಗೆ ಮರಳುವ ವ್ಯವಸ್ಥೆಯನ್ನು ಸರ್ಕಾರಗಳು ಇನ್ನಷ್ಟು ಚೆನ್ನಾಗಿ ನಿಭಾಯಿಸಬೇಕು ಎಂಬ ಒತ್ತಾಯ ಈ ದುರಂತದ ಬಳಿಕ ಜೋರಾಗಿದೆ. ಕೇಂದ್ರ ಸರ್ಕಾರವು ರಾಜ್ಯಗಳ ಜತೆಗಿನ ಸಮನ್ವಯದಲ್ಲಿ ಕಾರ್ಮಿಕರು ಮನೆಗೆ ಮರಳಲು ವ್ಯವಸ್ಥೆ ಮಾಡಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ.

ಸುರಕ್ಷತೆಗೆ ಸೂಚನೆ: ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ರೈಲ್ವೆ ಸುರಕ್ಷತಾ ಆಯುಕ್ತರು, ರೈಲ್ವೆ ಮಂಡಳಿಗೆ ಸೂಚಿಸಿದ್ದಾರೆ. ಹಳಿ ಗಸ್ತನ್ನು ಹೆಚ್ಚಿಸಬೇಕು. ಹಳಿಯಲ್ಲಿ ಯಾರಾದರೂ ಕಂಡು ಬಂದರೆ ಹತ್ತಿರದ ರೈಲು ನಿಲ್ದಾಣಕ್ಕೆ ಮಾಹಿತಿ ನೀಡಿ ರೈಲು ಬರುವುದನ್ನು ತಡೆಯಬೇಕು ಎಂದು ಅವರು ಹೇಳಿದ್ದಾರೆ.

ಕೇಳಿಸದ ಕೂಗು
ಹಳಿಗಳಿಗಿಂತ ದೂರ ಇದ್ದ ನಾಲ್ವರು ರೈಲು ಬರುವುದನ್ನು ಕಂಡು ಕೂಗಿ ತಮ್ಮವರನ್ನು ಎಚ್ಚರಿಸಲು ಯತ್ನಿಸಿದ್ದಾರೆ. ಆದರೆ, ಆ 16 ನತದೃಷ್ಟರಿಗೆ ಈ ಕೂಗು ಕೇಳಿಸಲೇ ಇಲ್ಲ. ಬದುಕುಳಿದ ನಾಲ್ವರಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ತಮ್ಮವರು ರೈಲಿನಡಿ ಸಿಲುಕಿದ್ದನ್ನು ಕಂಡ ಮೂವರು ಆಘಾತಗೊಂಡಿದ್ದಾರೆ. ಅವರಿಗೆ ಆಪ್ತಸಮಾಲೋಚನೆ ಒದಗಿಸಲಾಗಿದೆ. ಅವರಿಂದ ಘಟನೆಯ ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ.

ತನಿಖೆಗೆ ಆದೇಶ: ಘಟನೆಯ ಬಗ್ಗೆ ತನಿಖೆಗೆ ರೈಲ್ವೆ ಆದೇಶಿಸಿದೆ. ಔರಂಗಾಬಾದ್‌ ದುರ್ಘಟನೆಯನ್ನು ರೈಲ್ವೆಯು ಅಪಘಾತ ಎಂದು ಪರಿಗಣಿಸುವುದಿಲ್ಲ. ಬದಲಿಗೆ, ಇದು ಅಕ್ರಮ ಪ್ರವೇಶ. ಹಾಗಿದ್ದರೂ ಇಂತಹ ದುರಂತ ನಡೆದು ಮೃತಪಟ್ಟವರ ಕುಟುಂಬಕ್ಕೆ ರೈಲ್ವೆಯು ಪರಿಹಾರ ಕೊಟ್ಟ ನಿದರ್ಶನಗಳು ಇವೆ.

ಅಕ್ರಮ ಪ್ರವೇಶವನ್ನು ತಡೆಯುವುದಕ್ಕೆ ರೈಲ್ವೆಯಲ್ಲಿ ಗಸ್ತು ತಂಡ ಇದೆ. ಹಳಿಯನ್ನು ಪರಿಶೀಲಿಸುವುದು ಈ ತಂಡದ ಹೊಣೆ. ಹಳಿಯಲ್ಲಿ ಮಲಗಿದ್ದ ಕಾರ್ಮಿಕರು ಅವರ ಕಣ್ಣಿಗೆ ಯಾಕೆ ಬಿದ್ದಿಲ್ಲ ಎಂಬ ಬಗ್ಗೆ ತನಿಖೆ ನಡೆಯಲಿದೆ.

ಮಕ್ಕಳು ಅನಾಥ
ಲಖನೌ: ತಮ್ಮೆರಡು ಮಕ್ಕಳನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಉತ್ತರ ಪ್ರದೇಶದಿಂದ ಛತ್ತೀಸಗಡದ ತಮ್ಮ ಊರಿಗೆ ಹೊರಟಿದ್ದ ವಲಸೆ ಕಾರ್ಮಿಕ ದಂಪತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಇವರ ಸೈಕಲ್‌ಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಕೃಷ್ಣ ಸಾಹು ಮತ್ತು ಹೆಂಡತಿ ಪ್ರಮೀಳಾ ಅವರು ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದರು. ಊರಿಗೆ ಮರಳಲು ಯಾವುದೇ ವಾಹನ ವ್ಯವಸ್ಥೆ ಅವರಿಗೆ ದೊರೆತಿರಲಿಲ್ಲ. ಹಾಗಾಗಿ ಅವರು ಸೈಕಲ್‌ನಲ್ಲಿಯೇ ಊರು ಸೇರಲು ನಿರ್ಧರಿಸಿದ್ದರು. ಮಕ್ಕಳಾದ ನಿಖಲ್‌ ಮತ್ತು ಚಾಂದಿನಿ ಅವರ ಸ್ಥಿತಿ ಸ್ಥಿರವಾಗಿದೆ.

**

ಕಾರ್ಮಿಕರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳ ಸಂವೇದನಾರಹಿತ ಧೋರಣೆಯನ್ನು ಈ ದುರ್ಘಟನೆ ತೋರಿಸಿದೆ. ಕಾರ್ಮಿಕರನ್ನು ರೈಲು, ಬಸ್‌ಗಳಲ್ಲಿ ಊರಿಗೆ ಕಳುಹಿಸಬೇಕು.
-ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.