ADVERTISEMENT

ಕೇಂದ್ರ ಸಚಿವರು ಬುಲೆಟ್ ರೈಲು ಬಿಡುವುದರಲ್ಲಿ ನಿರತರಾಗಿದ್ದಾರೆ: ಸಂಜಯ್ ರಾವುತ್

ಪಿಟಿಐ
Published 27 ಅಕ್ಟೋಬರ್ 2024, 9:16 IST
Last Updated 27 ಅಕ್ಟೋಬರ್ 2024, 9:16 IST
<div class="paragraphs"><p>ಸಂಜಯ್ ರಾವುತ್</p></div>

ಸಂಜಯ್ ರಾವುತ್

   

ಮುಂಬೈ: ನಗರದ ಬಾಂದ್ರಾ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತ ಸಂಭವಿಸಿದೆ. ಘಟನೆಯನ್ನು ಖಂಡಿಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂಬೈಯಲ್ಲಿ ಪ್ರಯಾಣಿಕರನ್ನು ನಿರ್ಲಕ್ಷಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವರು ಬುಲೆಟ್ ರೈಲು ಯೋಜನೆಯನ್ನು ಜಾರಿಗೆ ತರಲು ನಿರತರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ADVERTISEMENT

‘ಮುಂಬೈ ನಗರವು ಕೇಂದ್ರ ಸರ್ಕಾರಕ್ಕೆ ಗರಿಷ್ಠ ಆದಾಯವನ್ನು ತಂದು ಕೊಡುತ್ತದೆ. ಆದರೆ, ಇಲ್ಲಿನ ಪ್ರಯಾಣಿಕರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳಪೆ ಮೂಲಸೌಕರ್ಯದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲೆಟ್ ರೈಲು ಯೋಜನೆಯಲ್ಲಿ ನಿರತರಾಗಿರುವುದು ಎಷ್ಟು ಸರಿ’ ಎಂದು ರಾವುತ್ ಟೀಕಿಸಿದ್ದಾರೆ.

‘ರೈಲ್ವೆ ಸಚಿವರನ್ನು ಯಾವಾಗಲೂ ಉನ್ನತ ಶಿಕ್ಷಣ ಪಡೆದವರೆಂದು ಬಿಂಬಿಸಲಾಗುತ್ತದೆ. ಐಐಟಿ ಸಂಸ್ಥೆಗಳೊಂದಿಗಿನ ಅತಿ ಹೆಚ್ಚು ಒಡನಾಟ ಹೊಂದಿರುತ್ತಾರೆ. ಆದರೆ, ಪ್ರಯಾಣಕ್ಕಾಗಿ ರೈಲ್ವೆಯನ್ನೇ ಅವಲಂಬಿಸಿರುವ ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಶ್ವಿನಿ ವೈಷ್ಣವ್ ವಿಫಲರಾಗಿದ್ದಾರೆ’ ಎಂದು ರಾವುತ್ ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಾದ್ಯಂತ 25ಕ್ಕೂ ಹೆಚ್ಚು ರೈಲ್ವೆ ಅಪಘಾತಗಳು ಸಂಭವಿಸಿವೆ. ಬಾಂದ್ರಾ ನಿಲ್ದಾಣದಲ್ಲಿ ಸಂಭವಿಸಿರುವ ಕಾಲ್ತುಳಿತಕ್ಕೆ ಯಾರು ಹೊಣೆ? ರೈಲ್ವೆ ಸಚಿವರಿಗೆ ಜವಾಬ್ದಾರಿ ಇಲ್ಲವೇ ಎಂದು ರಾವುತ್‌ ಪ್ರಶ್ನಿಸಿದ್ದಾರೆ.

ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.

ಇಂದು (ಭಾನುವಾರ) ಬೆಳಿಗ್ಗೆ ಮುಂಬೈನ ಬಾಂದ್ರಾ ನಿಲ್ದಾಣದಲ್ಲಿ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳುವ ರೈಲು ಹತ್ತುವ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.