ADVERTISEMENT

ಸಿಗ್ನಲ್‌ಗಳಲ್ಲಿ ‘ಶಾರ್ಟ್ ಕಟ್’ ಅಳವಡಿಕೆ: ಸಿಬ್ಬಂದಿಗೆ ರೈಲ್ವೆ ಮಂಡಳಿ ತರಾಟೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 14:06 IST
Last Updated 15 ಜೂನ್ 2023, 14:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈಲ್ವೆ ಸಿಗ್ನಲ್‌ಗಳ ನಿರ್ವಹಣೆ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸದೇ ಸಿಗ್ನಲ್‌ಗಳ ಮರು ಸಂಪರ್ಕಿಸಲು ‘ಶಾರ್ಟ್‌ ಕಟ್‌’ ಅಳವಡಿಸಿಕೊಂಡಿರುವುದಕ್ಕೆ ಸಿಗ್ನಲ್‌ ನಿರ್ವಹಣಾ ಸಿಬ್ಬಂದಿಯನ್ನು ರೈಲ್ವೆ ಮಂಡಳಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಕಳೆದ ಏಪ್ರಿಲ್ 3ರಂದು ಬರೆದ ಪತ್ರದಲ್ಲಿ ರೈಲ್ವೆ ಮಂಡಳಿಯು ವಿವಿಧ ರೈಲ್ವೆ ವಲಯಗಳಿಂದ ಇಂತಹ ಐದು ಘಟನೆಗಳು ವರದಿಯಾಗಿರುವುದನ್ನು ಉಲ್ಲೇಖಿಸಿದೆ. ರೈಲ್ವೆಯ ವಿವಿಧ ವಲಯಗಳಲ್ಲಿ ನಡೆದಿರುವ ಈ ಘಟನೆಗಳನ್ನು ಅಸುರಕ್ಷಿತ, ಗಂಭೀರ ಕಳವಳದ ಮತ್ತು ಎಚ್ಚರಿಕೆಯ ಸಮಸ್ಯೆಗಳೆಂದು ರೈಲ್ವೆ ಮಂಡಳಿಯು ಹೇಳಿದೆ. 

ಸಿಗ್ನಲ್‌ಗಳಲ್ಲಿ ದೋಷಗಳು, ವೈಫಲ್ಯಗಳು ಕಾಣಿಸಿಕೊಂಡಾಗ ಅವುಗಳನ್ನು ಬದಲಿಸುವುದು ಅಥವಾ ದುರಸ್ತಿಪಡಿಸಿ ಮರು ಜೋಡಿಸುವಾಗ ಸಿಗ್ನಲ್‌ ಮತ್ತು ಟೆಲಿಕಾಂ ಸಿಬ್ಬಂದಿ ಸರಿಯಾದ ಕ್ರಮಗಳನ್ನು ಅನುಸರಿಸಿಲ್ಲ. ಅಲ್ಲದೆ, ದುರಸ್ತಿ ಮತ್ತು ನಿರ್ವಹಣೆಯ ವೇಳೆ ಅವುಗಳನ್ನು ಸರಿಯಾಗಿ ಪರೀಕ್ಷಿಸಿಯೂ ಇಲ್ಲ. ಸಿಗ್ನಲ್‌ಗಳು ವೈಫಲ್ಯವಾದಾಗ ತಪ್ಪಾದ ವೈರಿಂಗ್‌ ಕೆಲಸವೂ ನಡೆದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.   

ADVERTISEMENT

‘ಇಂತಹ ಅಭ್ಯಾಸಗಳು ರೈಲ್ವೆ ಸುರಕ್ಷತೆಯ ಕೈಪಿಡಿ ಮತ್ತು ನಿಬಂಧನೆಗಳನ್ನು ದುರ್ಬಲಗೊಳಿಸುವುದನ್ನು ಪ್ರತಿಬಿಂಬಿಸುತ್ತವೆ. ಇವು ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆಗೆ ಅಪಾಯಕಾರಿಯಾಗಿದೆ. ಅಲ್ಲದೆ, ಸಂಭಾವ್ಯ ಅಪಾಯವನ್ನು ತಂದೊಡ್ಡುತ್ತವೆ. ಇದು ಕೊನೆಯಾಗಬೇಕು’ ಎಂದು ರೈಲ್ವೆ ಮಂಡಳಿ ಪತ್ರದಲ್ಲಿ ಹೇಳಿದೆ.

ವಾರದ ಸುರಕ್ಷತೆ ಸಭೆಗಳಲ್ಲಿ ವಿಭಾಗೀಯ ಮತ್ತು ಕೇಂದ್ರ ಕಚೇರಿಯ ಮಟ್ಟದಲ್ಲಿ ಈ ಅಂಶಗಳನ್ನು ಪರಿಶೀಲಿಸಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಿದೆ. 

ಜೂನ್ 2ರಂದು ಒಡಿಶಾದ ಬಾಲೇಶ್ವರದಲ್ಲಿ ನಡೆದ ರೈಲುಗಳ ಭೀಕರ ಅಪಘಾತಕ್ಕೆ ಸಿಗ್ನಲ್‌ನಲ್ಲಿ ಹಸ್ತಕ್ಷೇಪ ನಡೆದಿರುವ ಬಗ್ಗೆ ರೈಲ್ವೆ ಸಚಿವರು ಮತ್ತು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.