ADVERTISEMENT

ಉದ್ಯೋಗಕ್ಕಾಗಿ ಪರೀಕ್ಷೆ ಅಕ್ರಮ: ಬೆರಳ ಚರ್ಮ ತೆಗೆದು ಸ್ನೇಹಿತನ ಕೈಗೆ ಅಂಟಿಸಿದ...!

ವಂಚನೆ ಪ್ರಕರಣ ದಾಖಲು; ಆರೋಪಿಗಳ ಬಂಧನ

ಪಿಟಿಐ
Published 27 ಆಗಸ್ಟ್ 2022, 14:10 IST
Last Updated 27 ಆಗಸ್ಟ್ 2022, 14:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಡೋದರ: ರೈಲ್ವೆಯಲ್ಲಿ ಕೆಲಸ ಗಿಟ್ಟಿಸುವ ಉದ್ದೇಶದಿಂದಉದ್ಯೋಗಾಕಾಂಕ್ಷಿ ಯುವಕನೊಬ್ಬ ವಿಚಿತ್ರ ಪ್ರಯತ್ನ ಮಾಡಿ ಸಿಕ್ಕಿಬಿದ್ದಿದ್ದಾನೆ. ತನ್ನ ಬದಲು ಮತ್ತೊಬ್ಬರಿಂದ ಪರೀಕ್ಷೆ ಬರೆಸುವ ಯೋಜನೆಯಲ್ಲಿದ್ದ ಯುವಕ ಪರೀಕ್ಷಾ ಕೇಂದ್ರದಲ್ಲಿ ಬಯೋಮೆಟ್ರಿಕ್ ತಪಾಸಣೆ ಪೂರ್ಣಗೊಳಿಸುವುದಕ್ಕಾಗಿ ತನ್ನ ಹೆಬ್ಬರಳಿನ ಚರ್ಮವನ್ನೇ ಕಿತ್ತು ಸ್ನೇಹಿತನ ಬೆರಳಿಗೆ ಅಂಟಿಸಿ ದುಸ್ಸಾಹಸ ಮಾಡಿದ್ದಾನೆ.

ಈ ಪ್ರಕರಣ ಎಲ್ಲರಲ್ಲೂಅಚ್ಚರಿ ಮೂಡಿಸಿದೆ. ಆದರೆ, ಆತನ ಪ್ರಯತ್ನ ಸಫಲವಾಗಿಲ್ಲ.

ಗುಜರಾತ್‌ನ ವಡೋದರದ ಕೇಂದ್ರವೊಂದರಲ್ಲಿಆಗಸ್ಟ್‌ 22ರಂದು ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ನಕಲಿ ವ್ಯಕ್ತಿಯ ಕೈಗೆ ಅಂಟಿಸಿದ್ದ ಚರ್ಮವು,ಮೇಲ್ವಿಚಾರಕರು ಸ್ಯಾನಿಟೈಸರ್‌ ಸ್ಪ್ರೇ ಮಾಡಿದ (ಸಿಂಪಡಿಸಿದ) ಕೂಡಲೇ ಉದುರಿಹೋಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಈ ಕೃತ್ಯವೆಸಗಿದ ಉದ್ಯೋಗಾಕಾಂಕ್ಷಿ ಮನೀಶ್ ಕುಮಾರ್‌ ಹಾಗೂ ಆತನಿಗಾಗಿ ಪರೀಕ್ಷೆ ಬರೆಯಲು ಬಂದಿದ್ದ ರಾಜ್ಯಗುರು ಗುಪ್ತಾ ಎಂಬ ಇಬ್ಬರನ್ನು ವಂಚನೆ ಮತ್ತು ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಈ ಇಬ್ಬರೂ ಬಿಹಾರದ ಮುಂಗೆರ್‌ ಜಿಲ್ಲೆಯವರು. ಇವರಿಬ್ಬರಿಗೂ 20–21 ವರ್ಷ ವಯಸ್ಸಾಗಿದ್ದು, 12ನೇ ತರಗತಿ ಉತ್ತೀರ್ಣರಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಎಸಿಪಿ) ಎಸ್‌.ಎಂ. ವರೊತರಿಯಾ ಮಾಹಿತಿ ನೀಡಿದ್ದಾರೆ.

ರೈಲ್ವೆ ಇಲಾಖೆಯಿಂದ ಮಾನ್ಯತೆ ಪಡೆದ ಖಾಸಗಿ ಕಂಪೆನಿಯು ಇಲಾಖೆಯಲ್ಲಿನ 'ಡಿ' ಗ್ರೂಪ್‌ ಹುದ್ದೆಗಳಿಗೆ ಇಲ್ಲಿನ ಲಕ್ಷ್ಮೀಪುರ ಪ್ರದೇಶದ ಕಟ್ಟಡವೊಂದರಲ್ಲಿ ಆಗಸ್ಟ್‌ 22ರಂದು ಪರೀಕ್ಷೆ ಆಯೋಜಿಸಿತ್ತು. 600ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಲಕ್ಷ್ಮೀಪುರ ಪ್ರದೇಶ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

'ಪರೀಕ್ಷೆಯಲ್ಲಿ ಯಾವುದೇ ರೀತಿಯ ವಂಚನೆ ನಡೆಯದಂತೆ ನೋಡಿಕೊಳ್ಳಲು, ಆಧಾರ್‌ಕಾರ್ಡ್‌ಗೆ ಜೋಡಣೆಯಾಗಿರುವ ಬೆರಳ ಗುರುತನ್ನು ಬಯೋಮೆಟ್ರಿಕ್‌ನಲ್ಲಿ ಪರಿಶೀಲನೆಗೆ ಒಳಪಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ,ಅಭ್ಯರ್ಥಿ ಮನೀಶ್‌ ಕುಮಾರ್‌ ಬೆರಳ ಗುರುತುಬಯೋಮೆಟ್ರಿಕ್‌ ಸಾಧನದಲ್ಲಿ ಪದೇಪದೇ ಪ್ರಯತ್ನಿಸಿದ್ದರೂ ಹೊಂದಾಣಿಕೆಯಾಗಿರಲಿಲ್ಲ' ಎಂದುವರೊತರಿಯಾ ಹೇಳಿದ್ದಾರೆ.

ಮುಂದುವರಿದು, ಇದೇ ವೇಳೆ ಅಭ್ಯರ್ಥಿಯು ತನ್ನ ಎಡಗೈ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳುವ ಮೂಲಕ, ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಮೇಲ್ವಿಚಾರಕರು ಗಮನಿಸಿದ್ದಾರೆ. 'ಯಾವಾಗ ಆತನ ಎಡಗೈಗೆ ಸ್ಯಾನಿಟೈಸರ್‌ ಹಾಕಿದರೋ, ಆಗ ಅಂಟಿಸಿದ್ದ ಚರ್ಮ ಉದುರಿಹೋಗಿತ್ತು' ಎಂದು ವಿವರಿಸಿದ್ದಾರೆ.

ಪರೀಕ್ಷೆಯಲ್ಲಿ ವಂಚನೆಯ ಪ್ರಯತ್ನ ನಡೆದಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 465 (ನಕಲಿ), ಸೆಕ್ಷನ್‌ 419 (ವಂಚನೆ) ಹಾಗೂ ಸೆಕ್ಷನ್‌ 120-B (ಅಪರಾಧಕ್ಕೆ ಸಂಚು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಸಿಕ್ಕಿಬಿದ್ದ ವ್ಯಕ್ತಿಯು (ರಾಜ್ಯಗುರು ಗುಪ್ತಾ) ತನ್ನ ನಿಜವಾದ ಹೆಸರು ಹಾಗೂ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ.

ಚರ್ಮ ತೆಗೆದದ್ದು ಹೇಗೆ?
ಗುಪ್ತಾ ಚೆನ್ನಾಗಿ ಓದಿಕೊಂಡಿದ್ದ. ಈ ಕಾರಣದಿಂದ ನಕಲಿ ಗುರುತು ಸೃಷ್ಟಿಸಿ ತನ್ನ ಬದಲು ಗುಪ್ತಾನನ್ನೇ ಪರೀಕ್ಷೆಗೆ ಕಳುಹಿಸುವ ಉಪಾಯವನ್ನು ಕುಮಾರ್‌ ಮಾಡಿದ್ದ.

'ಪರೀಕ್ಷಾ ಕೇಂದ್ರದಲ್ಲಿ ಬಯೋಮೆಟ್ರಿಕ್‌ ತಪಾಸಣೆ ನಡೆಯುವ ಬಗ್ಗೆ ಕುಮಾರ್‌ಗೆ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಪರೀಕ್ಷೆಗೆ ಒಂದುದಿನ ಇದ್ದಾಗ ತನ್ನ ಎಡಗೈ ಹೆಬ್ಬೆರಳನ್ನು ಚೆನ್ನಾಗಿ ಕಾದಿದ್ದ ಪಾತ್ರೆಯ ಮೇಲೆ ಇಟ್ಟಿದ್ದ. ಇದರಿಂದಾಗಿ ಬೊಬ್ಬೆ (ಗುಳ್ಳೆ) ಎದ್ದಿತ್ತು. ಈ ವೇಳೆ ಬ್ಲೇಡ್‌ ಬಳಸಿ ಚರ್ಮವನ್ನು ಕತ್ತರಿಸಿದ್ದ ಆತ, ನಂತರ ಅದನ್ನು ಗುಪ್ತಾ ಬೆರಳಿಗೆ ಅಂಟಿಸಿದ್ದ. ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ' ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.