ಗುವಾಹಟಿ: ನೆರೆಯ ಬಾಂಗ್ಲಾದೇಶಿಗರ ಅಕ್ರಮ ವಲಸೆ ತಡೆಯುವುದರ ಭಾಗವಾಗಿ ರೈಲ್ವೆ ರಕ್ಷಣಾ ಪಡೆಯು (ಆರ್‌ಪಿಎಫ್) ಕೈಗೊಂಡ ಎರಡು ತಿಂಗಳ ಕಾರ್ಯಾಚರಣೆಯಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಬಂಧಿಸಿದೆ ಎಂದು ವರದಿಯಾಗಿದೆ.
ತ್ರಿಪುರಾದಲ್ಲಿ ಬಿಎಸ್ಎಫ್ ಸಿಬ್ಬಂದಿ ಬಾಂಗ್ಲಾದೇಶದ ಇಬ್ಬರು ನಾಗರಿಕರು ಮತ್ತು ರೋಹಿಂಗ್ಯಾ ಸಮುದಾಯದ ಇಬ್ಬರನ್ನು ಭಾನುವಾರ ಬಂಧಿಸಿದ್ದಾರೆ.
ಜೂನ್‌ನಲ್ಲಿ 47 ಅಕ್ರಮ ವಲಸಿಗರು ಮತ್ತು ಭಾರತದ ಐವರು ಏಜೆಂಟ್‌ಗಳು ಹಾಗೂ ಜುಲೈ ತಿಂಗಳಲ್ಲಿ ಈವರೆಗೆ 41 ಮಂದಿಯನ್ನು ಬಂಧಿಸಲಾಗಿದೆ ಎಂದು ಎನ್ಎಫ್ಆರ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಸಬ್ಯಸಾಚಿ ಡೀ ಹೇಳಿದ್ದಾರೆ.
ಜುಲೈ 2ರಂದು ತ್ರಿಪುರಾದ ಅಗರ್ತಲಾ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್ ತಂಡವು 9 ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದ 11 ಮಂದಿಯ ತಂಡವನ್ನು ಪತ್ತೆ ಹಚ್ಚಿತ್ತು. ಈ 11 ಮಂದಿ ತಾವು ಭಾರತೀಯರು ಎಂಬುದಕ್ಕೆ ಪೂರಕವಾಗುವ ಯಾವುದೇ ದಾಖಲೆಗಳನ್ನು ಹೊಂದಿಲ್ಲದ ಕಾರಣ ಅವರನ್ನು ಬಂಧಿಸಲಾಗಿತ್ತು. ಕೊನೆಗೆ ತಾವು ಅಕ್ರಮವಾಗಿ ಗಡಿ ನುಸುಳಿರುವುದಾಗಿ ಒಪ್ಪಿಕೊಂಡಿದ್ದರು. ಅಲ್ಲದೆ, ಅಗರ್ತಲಾ ನಿಲ್ದಾಣದಲ್ಲಿ ಆರ್‌ಪಿಎಫ್ ತಂಡದ ಬಲೆಗೆ ಬಿದ್ದ ಇತರರು ಸಹ ತಾವು ಅಕ್ರಮವಾಗಿ ಭಾರತಕ್ಕೆ ಬಂದಿದ್ದು, ರೈಲಿನ ಮೂಲಕ ಕೋಲ್ಕತ್ತಕ್ಕೆ ತೆರಳುತ್ತಿರುವುದಾಗಿ ಹೇಳಿದ್ದರು ಎಂದು ಸವ್ಯಸಾಚಿ ತಿಳಿಸಿದ್ದಾರೆ.
ಭಾರತವು ಬಾಂಗ್ಲಾದೇಶದೊಂದಿಗೆ 4,096 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ. ಆದರೆ, ತ್ರಿಪುರಾ, ಅಸ್ಸಾಂ, ಮೇಘಾಲಯ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಕ್ರಮ ವಲಸೆ ಸಮಸ್ಯೆಯು ತೀವ್ರವಾಗಿದೆ. ಅಕ್ರಮ ವಲಸಿಗರ ಪ್ರವೇಶ ತಡೆಗೆ ಆರ್‌ಪಿಎಫ್ ಸಿಬ್ಬಂದಿ ರೈಲುಗಳು ಮತ್ತು ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಅಕ್ರಮ ವಲಸಿಗರು ಕೆಲಸ ಹುಡುಕುತ್ತ ಕೋಲ್ಕತ್ತ, ದೆಹಲಿ ಮತ್ತು ಬೆಂಗಳೂರು ಸೇರಿದಂತೆ ಇನ್ನಿತರ ನಗರಗಳಿಗೆ ತೆರಳುವಾಗ ಸಿಕ್ಕಿಬೀಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
1997ರಲ್ಲಿ ಆರಂಭವಾದ ಮ್ಯಾನ್ಮಾರ್ ಸಂಘರ್ಷದಿಂದಾಗಿ ರೋಹಿಂಗ್ಯಾಗಳು ಬೇರೆ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದು, ಬಾಂಗ್ಲಾದೇಶದಲ್ಲಿ ಹೆಚ್ಚು ರೋಹಿಂಗ್ಯಾಗಳು ಆಶ್ರಯ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.