ADVERTISEMENT

ರೈಲ್ವೆ ನೇಮಕದಲ್ಲಿ ಆಕ್ರಮ ಆರೋಪ ‘ಬಿಹಾರ ಬಂದ್‌‘ಗೆ ಮಿಶ್ರ ಪ್ರತಿಕ್ರಿಯೆ

ಪಿಟಿಐ
Published 28 ಜನವರಿ 2022, 11:54 IST
Last Updated 28 ಜನವರಿ 2022, 11:54 IST
ರೈಲ್ವೆ ನೇಮಕಾತಿಯಲ್ಲಿ ಅಕ್ರಮ, ತಾರತಮ್ಯ ತಡೆಗೆ ಆಗ್ರಹಿಸಿ ಶುಕ್ರವಾರ ಬಿಹಾರ ಬಂದ್ ವೇಳೆ ಪ್ರತಿಭಟನಕಾರರು ಪಾಟ್ನಾದಲ್ಲಿ ರಸ್ತೆಯಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು
ರೈಲ್ವೆ ನೇಮಕಾತಿಯಲ್ಲಿ ಅಕ್ರಮ, ತಾರತಮ್ಯ ತಡೆಗೆ ಆಗ್ರಹಿಸಿ ಶುಕ್ರವಾರ ಬಿಹಾರ ಬಂದ್ ವೇಳೆ ಪ್ರತಿಭಟನಕಾರರು ಪಾಟ್ನಾದಲ್ಲಿ ರಸ್ತೆಯಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು   

ಪಟ್ನಾ: ತಾಂತ್ರಿಕಯೇತರ ಹುದ್ದೆಗಳ ನೇಮಕದಲ್ಲಿ ರೈಲ್ವೆ ನೇಮಕಾತಿ ಮಂಡಳಿ ತಾರತಮ್ಯ ತೋರುತ್ತಿದ್ದು, ಅಕ್ರಮ ತಡೆಯಬೇಕು ಎಂದು ಆಗ್ರಹಿಸಿ ಶುಕ್ರವಾರ ನೀಡಿದ್ದ ಬಿಹಾರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿವಿಧ ವಿದ್ಯಾರ್ಥಿ ಸಂಘಟನೆಗಳು ನೀಡಿದ್ದ ಈ ಬಂದ್ ಕರೆಗೆ ಬಹುತೇಕ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು. ರೈಲ್ವೆ ನೇಮಕಾತಿ ಮಂಡಳಿಯ ವಿರುದ್ಧ ಪ್ರತಿಭಟನೆ, ಘೋಷಣೆ, ಅಲ್ಲಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಹುತೇಕ ವಾಣಿಜ್ಯ ಚಟುವಟಿಕೆ ಬಂದ್ ಆಗಿದ್ದವು. ವಾಹನ, ಜನಸಂಚಾರವೂ ಅಸ್ತವ್ಯಸ್ತಗೊಂಡಿತು.

ಪಟ್ನಾದಲ್ಲಿ ಜನನಿಬಿಡ ಅಶೋಕ ರಾಜಪಥದಲ್ಲಿ, ಹೃದಯಭಾಗದ ಡಾಕ್‌ ಬಂಗಲೆ ಬಳಿ ಭಾರಿ ಪ್ರತಿಭಟನೆ ನಡೆಯಿತು. ಪ್ರತಿಭಟನಕಾರರು ರಾಜಭವನದತ್ತ ತೆರಳುವಾಗ ಪೊಲೀಸರು ಅವರನ್ನು ಅಡ್ಡಗಟ್ಟಿದರು. ಅಲ್ಲಲ್ಲಿ ಪೊಲೀಸರ ಜೊತೆಗೆ ವಾಗ್ಯುದ್ಧ ನಡೆಸಿದ ಬೆಳವಣಿಗೆಗಳೂ ನಡೆದವು.

ADVERTISEMENT

ರಾಜ್ಯದ ಬಕ್ಸಾರ್‌, ಜೆಹಾನಾಬಾದ್‌, ಭಾಗಲ್ಪುರ, ಕತಿಹಾರ್, ಬೆಗುಸರಾಯ್‌, ಮುಂಗೆರ್‌ ಸೇರಿದಂತೆ ಪ್ರಮುಖ ನಗರಗಳಲ್ಲಿಯೂ ಪ್ರತಿಭಟನೆ ನಡೆಯಿತು. ಆರ್‌ಜೆಡಿ, ಸಿಪಿಐ–ಎಂಎಲ್‌ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.

ಎನ್‌ಡಿಎ ಜೊತೆ ಗುರುತಿಸಿಕೊಂಡಿರುವ ಹಿಂದೂಸ್ತಾನಿ ಆವಾಮ್‌ ಮೋರ್ಚಾದ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಜೀತನ್‌ ರಾಮ್‌ ಮಾಂಜಿ, ವಿಕಾಸ್‌ಹೀಲ್‌ ಇನ್ಸಾನ್‌ ಪಾರ್ಟಿಯ ಸ್ಥಾಪಕ, ಸಚಿವ ಮುಖೇಶ್‌ ಸಹಾನಿ ನೈತಿಕ ಬೆಂಬಲ ನೀಡಿದರು.

ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್‌ ರಂಜನ್‌ ಸಿಂಗ್ ಅವರು ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ರೈಲ್ವೆ ನೇಮಕಾತಿ ಮಂಡಳಿಗೆ ಆಗ್ರಹಪಡಿಸಿದ್ದರೆ, ಮಾಜಿ ಡಿಸಿಎಂ, ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ, ಅನ್ಯಾಯ ಆಗಲು ಮೋದಿ ಸರ್ಕಾರ ಬಿಡುವುದಿಲ್ಲ, ಪ್ರತಿಭಟನಕಾರರು ತಾಳ್ಮೆ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.