ನವದೆಹಲಿ:‘ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಹಿರಿಯ ವಾಣಿಜ್ಯ ವ್ಯವಸ್ಥಾಪಕ ಹುದ್ದೆಯಿಂದ ಅಮಾನತುಗೊಳಿಸಲು ಉತ್ತರ ರೈಲ್ವೆ ವಿಭಾಗವು ಮುಂದಾಗಿದೆ’ ಎಂದು ರೈಲ್ವೆ ವಕ್ತಾರ ಸೋಮವಾರ ತಿಳಿಸಿದರು.
‘ರೈಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಸುಶೀಲ್ ಕುಮಾರ್ ಅವರು ಶಾಲಾಮಟ್ಟದಲ್ಲಿ ಕ್ರೀಡೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ದೆಹಲಿ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸಲು 2015ರಲ್ಲಿ ನಿಯೋಜನೆಗೊಂಡಿದ್ದರು. ಸುಶೀಲ್ ಕುಮಾರ್ ಅವರನ್ನು ಛತ್ರಸಾಲಾ ಕ್ರೀಡಾಂಗಣದ ವಿಶೇಷ ಅಧಿಕಾರಿಯನ್ನಾಗಿ ನಿಯೋಜಿಸಿತ್ತು. ಈ ನಿಯೋಜನೆಯನ್ನು 2020ರವರೆಗೆ ವಿಸ್ತರಿಸಲಾಗಿತ್ತು. 2021ರಲ್ಲಿ ಸುಶೀಲ್ ಕುಮಾರ್ ಅವರು ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ದೆಹಲಿ ಸರ್ಕಾರ ಅದನ್ನು ತಿರಸ್ಕರಿಸಿತ್ತು. ಬಳಿಕ, ಮಾತೃ ಇಲಾಖೆಗೆ ಹಿಂತಿರುಗಿದ್ದರು’ ಎಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿದರು.
‘ಕೊಲೆ ಪ್ರಕರಣ ಸಂಬಂಧ ದೆಹಲಿ ಸರ್ಕಾರ ಕಳುಹಿಸಿದ ವರದಿಯು ಭಾನುವಾರ ಲಭ್ಯವಾಗಿದೆ. ಸುಶೀಲ್ ಕುಮಾರ್ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ. ಹಾಗಾಗಿ ಅವರನ್ನು ಅಮಾನತುಗೊಳಿಸಲಾಗುವುದು. ಈ ಸಂಬಂಧ ಕೆಲವು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುತ್ತೇವೆ’ ಎಂದು ಉತ್ತರ ರೈಲ್ವೆ ವಿಭಾಗದ ಸಿಪಿಆರ್‌ಒ ದೀಪಕ್ ಕುಮಾರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.