ADVERTISEMENT

ರೈಲ್ವೆ ಅಕ್ರಮ ಇ–ಟಿಕೆಟ್‌ ಮಾರಾಟ ಜಾಲ ಪತ್ತೆ: ಭಯೋತ್ಪಾದನೆ ನಂಟು ಶಂಕೆ

ಏಜೆನ್ಸೀಸ್
Published 22 ಜನವರಿ 2020, 4:50 IST
Last Updated 22 ಜನವರಿ 2020, 4:50 IST
ರೈಲ್ವೆ
ರೈಲ್ವೆ   

ನವದೆಹಲಿ: ರೈಲ್ವೆ ಇ–ಟಿಕೆಟ್‌ಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಬಹುದೊಡ್ಡ ಜಾಲವೊಂದನ್ನು ರೈಲ್ವೆ ಭದ್ರತಾ ಪಡೆ ಬಯಲಿಗೆಳೆದಿದೆ.ಈ ಜಾಲದೊಂದಿಗೆ ಭಯೋತ್ಪಾದನೆಯ ನಂಟು ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದುಬೈನಲ್ಲಿನ ಭಯೋತ್ಪಾದನ ಸಂಘಟನೆಗಳಿಗೆ ಹಣಪೂರೈಕೆ ಮಾಡುತ್ತಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿಕಾನೂನು ಬಾಹಿರವಾಗಿ ಟಿಕೆಟ್‌ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಭುವನೇಶ್ವರದ ಗುಲಾಂ ಮುಸ್ತಫಾ (28) ಎಂಬಾತನನ್ನು ಬಂಧಿಸಲಾಗಿದೆ.

‘ಸಾಫ್ಟ್‌ವೇರ್‌ ಡೆವಲಪರ್‌ ಆದ ಈತ ಮೊದಲು ಬೆಂಗಳೂರಿನಲ್ಲಿ ಟಿಕೆಟ್‌ ದಲ್ಲಾಳಿಯಾಗಿದ್ದನು. ನಂತರಅಕ್ರಮ ಇ–ಟಿಕೆಟ್‌ ಬುಕ್ಕಿಂಗ್‌ ಹಾಗೂ ನಕಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಿ ವಂಚಿಸುತ್ತಿದ್ದ. ಐಆರ್‌ಸಿಟಿಸಿಯ 563 ಐಡಿಗಳು, 2,400 ಎಸ್‌ಬಿಐ ಶಾಖೆಗಳ ಪಟ್ಟಿ, 600 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಖಾತೆ ವಿವರಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದ್ದು, ಅಲೆಲ್ಲ ಖಾತೆಗಳನ್ನು ಹೊಂದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

‘ಕರ್ನಾಟಕಪೊಲೀಸರು, ಗುಪ್ತಚರ ದಳ, ಸ್ಪೆಷಲ್‌ ಬ್ಯೂರೋ, ಇ.ಡಿ., ಎನ್‌ಐಎ ಅಧಿಕಾರಿಗಳು ಕಳೆದ 10 ದಿನಗಳಿಂದಈತನ ವಿಚಾರಣೆ ನಡೆಸಿದ್ದಾರೆ’ಎಂದು ರೈಲ್ವೆ ಭದ್ರತಾ ಪಡೆಮಹಾ ನಿರ್ದೇಶಕ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

‘ಈ ಜಾಲದೊಂದಿಗೆಭಾರತದ ಸಾಫ್ಟ್‌ವೇರ್ ಕಂಪನಿಯೊಂದು ನಂಟು ಹೊಂದಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಆ ಕಂಪನಿಯು ಸಿಂಗಾಪುರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದೆ’ ಎಂದು ಅವರು ವಿವರಿಸಿದರು.

‘ಈ ಜಾಲದ ಮಾಸ್ಟರ್‌ ಮೈಂಡ್‌ ಹಮೀದ್‌ ಅಶ್ರಫ್‌ ಎಂಬುವವನು ತಿಂಗಳಿಗೆ 10 ರಿಂದ 15 ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾನೆ ಎಂಬುದು ತಿಳಿದು ಬಂದಿದೆ. ಅಶ್ರಫ್‌ ಸಹ ಸಾಫ್ಟ್‌ವೇರ್‌ ಡೆವಲಪರ್‌ ಆಗಿದ್ದು,2019ರಲ್ಲಿ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿನ ಶಾಲೆಯೊಂದರಬಾಂಬ್‌ ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ. ಸದ್ಯ ಈತ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ’ ಎಂದು ಹೇಳಿದರು.

ನಕಲಿ ಆಧಾರ್‌ ಸಿದ್ಧಪಡಿಸುವ ಆ್ಯಪ್‌

ಮುಸ್ತಫಾನ ಲ್ಯಾಪ್‌ಟಾಪ್‌ ಅನ್ನು ತಪಾಸಣೆಗೆ ಒಳಪಡಿಸಿದಾಗ, ಅದರಲ್ಲಿ ಡಾರ್ಕ್‌ನೆಟ್‌, ಲೈನೆಕ್ಸ್‌ ಆಧಾರಿತಸಿಸ್ಟಂಗಳನ್ನು ಹ್ಯಾಕ್‌ ಮಾಡುವ ಸಾಫ್ಟ್‌ವೇರ್‌, ನಕಲಿ ಆಧಾರ್‌ ಕಾರ್ಡ್‌ ಸಿದ್ಧಪಡಿಸುವ ಆ್ಯಪ್‌ ದೊರೆತಿದೆ. ಜೊತೆಗೆಪಾಕಿಸ್ತಾನ ಮೂಲದ ಧಾರ್ಮಿಕ ಸಂಘಟನೆಯ ಅನುಯಾಯಿ ಎಂಬುದೂ ತಿಳಿದುಬಂದಿದೆ. ಅವನ ಫೋನ್‌ನಲ್ಲಿ ಪಾಕಿಸ್ತಾನ, ಬಾಂಗ್ಲದೇಶ, ಮಧ್ಯಪ್ರಾಚ್ಯ, ಇಂಡೊನೇಷ್ಯ, ನೇಪಾಳದ ಅನೇಕರ ಫೋನ್‌ ನಂಬರ್‌ಗಳು ಹಾಗೂ 6 ವರ್ಚ್ಯಯಲ್‌ ನಂಬರ್‌ಗಳು ಸಿಕ್ಕಿವೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.