ನವದೆಹಲಿ: ಪ್ರಯಾಣ ದರದಲ್ಲಿ ಹಿರಿಯ ನಾಗರಿಕರಿಗೆ ನೀಡಿದ್ದ ರಿಯಾಯಿತಿಯನ್ನು ಕೋವಿಡ್ ಕಾರಣದಿಂದಾಗಿ ರದ್ದುಪಡಿಸಿದ ಪರಿಣಾಮ ರೈಲ್ವೆ ಇಲಾಖೆಯು 2022–23ನೇ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ ₹ 2,242 ಕೋಟಿ ಆದಾಯಗಳಿಸಿದೆ.
ಕೋವಿಡ್‌ನಿಂದಾಗಿ ರಿಯಾಯಿತಿ ರದ್ದುಪಡಿಸಿದ ಬಳಿಕ ಮಾರ್ಚ್ 20, 2020 ಮತ್ತು ಮಾರ್ಚ್ 31, 2022 ನಡುವಿನ ಅವಧಿಯಲ್ಲಿ ಹೆಚ್ಚುವರಿಯಾಗಿ ₹ 1,500 ಕೋಟಿ ಆದಾಯವನ್ನು ಇಲಾಖೆ ಗಳಿಸಿದೆ.
ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ರೈಲ್ವೆ ಇಲಾಖೆ ಈ ಮಾಹಿತಿ ನೀಡಿದೆ. ‘ಏಪ್ರಿಲ್ 1, 2022 ರಿಂದ ಮಾರ್ಚ್ 31, 2023ರ ಹಣಕಾಸು ವರ್ಷದಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣದರದಲ್ಲಿ ರಿಯಾಯಿತಿ ನೀಡಿಲ್ಲ. ಈ ಅವಧಿಯಲ್ಲಿ ಹಿರಿಯ ನಾಗರಿಕರಾದ 4.6 ಕೋಟಿ ಪುರುಷರು, 3.3 ಕೋಟಿ ಮಹಿಳೆಯರು, 18 ಸಾವಿರ ಲೈಂಗಿಕ ಅಲ್ಪಸಂಖ್ಯಾತರು ಪ್ರಯಾಣಿಸಿದ್ದರು‘ ಎಂದು ತಿಳಿಸಿದೆ.
ಈ ಅವಧಿಯಲ್ಲಿ ಪ್ರಯಾಣಿಸಿದ ಹಿರಿಯ ನಾಗರಿಕರಿಂದ ಒಟ್ಟು ₹ 5,062 ಕೋಟಿ ಆದಾಯ ಬಂದಿದೆ. ಇದರಲ್ಲಿ ಪ್ರಯಾಣದರ ರಿಯಾಯಿತಿ ರದ್ದುಪಡಿಸಿದ್ದರಿಂದ ಗಳಿಸಿದ ₹ 2,242 ಕೋಟಿಯೂ ಸೇರಿದೆ ಎಂದು ಎಂದು ಉತ್ತರದಲ್ಲಿ ರೈಲ್ವೆ ಇಲಾಖೆಯು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.