ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಪ್ರಸಾದ್‌ ಕುಟುಂಬಸ್ಥರ ಮೇಲೆ ಆರೋಪ ‍ಪಟ್ಟಿ

ಪಿಟಿಐ
Published 9 ಜನವರಿ 2024, 11:20 IST
Last Updated 9 ಜನವರಿ 2024, 11:20 IST
<div class="paragraphs"><p>ಲಾಲು ಪ್ರಸಾದ್</p></div>

ಲಾಲು ಪ್ರಸಾದ್

   

ನವದೆಹಲಿ: ‘ರೈಲ್ವೆ ಉದ್ಯೋಗಕ್ಕಾಗಿ ಭೂಮಿ’ ಹಗರಣದಲ್ಲಿ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹಾಗೂ ಅವರ ಪುತ್ರಿಯರಾದ ಮೀಸಾ ಭಾರತಿ, ಹೇಮಾ ಯಾದವ್‌ ಸೇರಿದಂತೆ ಹಲವು ಮಂದಿಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಆರೋಪ ಪಟ್ಟಿ ಸಲ್ಲಿಸಿದೆ.

ಲಾಲು ಪ್ರಸಾದ್‌ ಅವರ ಕುಟುಂಬ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಮಿತ್‌ ಕಾತ್ಯಾಲ್ (49), ರೈಲ್ವೆ ನೌಕರ ಹೃದಯಾನಂದ್‌ ಚೌಧರಿ, ಕಂಪನಿಗಳಾದ ಎ.ಕೆ ಇನ್ಫೋಸಿಸ್ಟಮ್ಸ್ ಹಾಗೂ ಎ.ಬಿ ಎಕ್ಸ್‌ಪೋರ್ಟ್ಸ್‌ ಪ್ರೈವೆಟ್‌ ಲಿಮಿಟೆಡ್‌ ಮತ್ತು ಈ ಎರಡೂ ಕಂಪನಿಗಳ ನಿರ್ದೇಶಕ ಶಾರಿಕುಲ್ ಬಾರಿ ಅವರ ಹೆಸರನ್ನೂ ಆರೋಪ ಪಟ್ಟಿ ಉಲ್ಲೇಖಿಸಲಾಗಿದೆ.

ADVERTISEMENT

ಇದೇ ಪ್ರಕರಣ ಸಂಬಂಧ ಕತಿಯಾಲ್ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಇ.ಡಿ ಬಂಧಿಸಿತ್ತು. ವಿಚಾರಣೆಗೆ ಹಾಜರಾಗಲು ಲಾಲು ಪ್ರಸಾದ್ ಯಾದವ್‌ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು. ಆದರೆ ಅವರು ಗೈರಾಗಿದ್ದರು. ಅವರ ಪುತ್ರ, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ಒಮ್ಮೆ ಇ.ಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ರಾಬ್ಡಿ ದೇವಿ, ಆರ್‌ಜೆಡಿ ರಾಜ್ಯಸಭಾ ಸಂಸದೆ ಮೀಸಾ ಭಾರತಿ, ಚಂದ್ರ ಯಾದವ್‌ ಹಾಗೂ ರಾಗಿಣಿ ಯಾದವ್‌ ಕೂಡ ಈಗಾಗಲೇ ಇ.ಡಿಯಿಂದ ವಿಚಾರಣೆ ಎದುರಿಸಿದ್ದಾರೆ.

ಯುಪಿಎ–1 ಸರ್ಕಾರದ ಅವಧಿಯಲ್ಲಿ ಲಾಲು ಪ್ರಸಾದ್‌ ಅವರು ರೈಲ್ವೆ ಸಚಿವರಾಗಿದ್ದಾಗ ಈ ಹಗರಣ ನಡೆದಿದೆ ಎನ್ನಲಾಗಿದೆ.

2004–2009ರ ಅವಧಿಯಲ್ಲಿ ರೈಲ್ವೆಯ ‘ಡಿ’ ಗ್ರೂಪ್‌ ಹುದ್ದೆಗೆ ಹಲವು ಮಂದಿಯನ್ನು ನೇಮಕ ಮಾಡಲಾಗಿತ್ತು. ಇದಕ್ಕಾಗಿ ಆಕಾಂಕ್ಷಿಗಳು ಲಾಲು ಯಾದವ್ ಅವರ ಕುಟುಂಬದವರ ಹಾಗೂ ಎ.ಕೆ ಇನ್ಫೋಸಿಸ್ಟಮ್ಸ್ ಪ್ರೈವೆಟ್‌ ಲಿಮಿಟೆಡ್‌ ಹೆಸರಿಗೆ ತಮ್ಮ ಭೂಮಿ ಬರೆದುಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.