ADVERTISEMENT

ದೇಶದಾದ್ಯಂತ ಎಲ್ಲ ಲೆವೆಲ್‌ ಕ್ರಾಸಿಂಗ್‌ಗಳಿಗೆ ಮುಕ್ತಿ ನೀಡಲು ಕ್ರಮ

ರೈಲ್ವೆ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಯ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 16:08 IST
Last Updated 20 ಜೂನ್ 2024, 16:08 IST
.
.   

ನವದೆಹಲಿ: ರೈಲ್ವೆ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ದೇಶದಾದ್ಯಂತ ಎಲ್ಲ ರೈಲ್ವೆ ಲೆವೆಲ್‌ ಕ್ರಾಸಿಂಗ್‌ಗಳಿಗೆ ಮುಕ್ತಿ ನೀಡಲು ಯೋಜನೆ ರೂಪಿಸಿದೆ. ಇದಕ್ಕಾಗಿ 17 ಸಾವಿರಕ್ಕೂ ಅಧಿಕ ಮೇಲ್ಸೇತುವೆ (ರೋಡ್‌ ಓವರ್‌ಬ್ರಿಜ್– ಆರ್‌ಒಬಿ) ಮತ್ತು ಅಂಡರ್‌ಪಾಸ್‌ಗಳನ್ನು (ರೋಡ್‌ ಅಂಡರ್‌ಬ್ರಿಜ್‌ –ಆರ್‌ಯುಬಿ) ನಿರ್ಮಿಸಲು ಮುಂದಾಗಿದೆ.

ರೈಲ್ವೆಯ ವಿವಿಧ ವಲಯಗಳಲ್ಲಿ ಮುಂದಿನ 14 ವರ್ಷಗಳಲ್ಲಿ ಒಟ್ಟು 17,083 ಆರ್‌ಒಬಿ/ ಆರ್‌ಯುಬಿ ನಿರ್ಮಾಣ ಮಾಡಲಾಗುವುದು. ಅದರಲ್ಲಿ 750 ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ಗಳ ನಿರ್ಮಾಣ ಕಾರ್ಯ ಈ ಹಣಕಾಸು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ರೈಲು ಅಪಘಾತ ಪ್ರಮಾಣ ಕಡಿಮೆ ಮಾಡಲು ರೈಲ್ವೆಯು ಈಗಾಗಲೇ ದೇಶದ ಎಲ್ಲ ಕಡೆ ಕಾವಲುರಹಿತ ಲೆವೆಲ್‌ ಕ್ರಾಸಿಂಗ್‌ಗಳನ್ನು ತೆಗೆದು ಹಾಕಿದೆ. ಇದೀಗ ಲೆವೆಲ್‌ ಕ್ರಾಸಿಂಗ್‌ಗಳನ್ನೇ ತೆಗೆದುಹಾಕಲು ಮುಂದಾಗಿದೆ.

ADVERTISEMENT

2004–2014ರ ಅವಧಿಯಲ್ಲಿ 825 ಮತ್ತು 2014–2024ರ ಅವಧಿಯಲ್ಲಿ 1,760 ಕಾವಲುರಹಿತ ಲೆವೆಲ್‌ ಕ್ರಾಸಿಂಗ್‌ಗಳನ್ನು ತೆಗೆದುಹಾಕಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 1,610 ಆರ್‌ಒಬಿ/ ಆರ್‌ಯುಬಿ ನಿರ್ಮಿಸಲಾಗಿದೆ.

ಈ ಹಿಂದೆ, ಕಾವಲುರಹಿತ ಲೆವೆಲ್‌ ಕ್ರಾಸಿಂಗ್‌ಗಳು ರೈಲು ಅಪಘಾತಗಳಿಗೆ ಪ್ರಮುಖ ತಾಣಗಳಾಗಿದ್ದವು. ಎಲ್ಲ ಕಾವಲುರಹಿತ ಲೆವೆಲ್‌ ಕ್ರಾಸಿಂಗ್‌ಗಳನ್ನು ತೆಗೆದುಹಾಕಿರುವುದರಿಂದ ಅಪಘಾತದ ಪ್ರಮಾಣ ಗಣನೀಯವಾಗಿ ತಗ್ಗಿದೆ. 2004–14ರ ಅವಧಿಯಲ್ಲಿ ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 143 ಮಂದಿ ಮೃತಪಟ್ಟಿದ್ದರೆ, 2014–24ರ ಅವಧಿಯಲ್ಲಿ ಸಾವಿನ ಪ್ರಮಾಣ 26ಕ್ಕೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳು ಹೊರತುಪಡಿಸಿ ಉಳಿದ ಕಡೆ ಲೆವೆಲ್‌ ಕ್ರಾಸಿಂಗ್‌ಗಳಿಗೆ ಒಪ್ಪಿಗೆ ನೀಡುವ ಮತ್ತು ನಿರ್ಮಾಣ ಕೆಲಸವನ್ನು ರೈಲ್ವೆ ಇಲಾಖೆಯು ಸ್ವಂತ ಖರ್ಚಿನಲ್ಲಿ ಮಾಡಲಿದೆ. ಆದ್ಯತೆ, ಕಾರ್ಯಸಾಧ್ಯತೆ ಮತ್ತು ಅನುದಾನದ ಲಭ್ಯತೆಯ ಆಧಾರದ ಮೇಲೆ ನಿರ್ಮಾಣ ಕೆಲಸವನ್ನು ಹಂತ–ಹಂತವಾಗಿ ತೆಗೆದುಕೊಳ್ಳಲು ಯೋಜನೆ ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.