ನವದೆಹಲಿ: ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸಲು ಮುಂದಿನ ಆರರಿಂದ ಎಂಟು ತಿಂಗಳಲ್ಲಿ 18,799 ಸಹಾಯಕ ಲೋಕೋ ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಈ ಹಿಂದೆ 5,696 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಜೂನ್ 18ರಂದು ಇದನ್ನು ಪರಿಷ್ಕರಿಸಿ, 18,799 ಸಹಾಯಕ ಲೋಕೋ ಪೈಲಟ್‌ಗಳ ನೇಮಕಕ್ಕೆ ನಿರ್ಧರಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಸರಕು ಸಾಗಣೆ ರೈಲು ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ರೈಲಿನ ನಾಲ್ಕು ಬೋಗಿಗಳು ಹಾನಿಯಾಗಿದ್ದವು. ಈ ಅಪಘಾತದಲ್ಲಿ ಒಟ್ಟು 10 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಬೆನ್ನಲ್ಲೇ ರೈಲ್ವೆ ಇಲಾಖೆಯು ಹೆಚ್ಚಿನ ಸಂಖ್ಯೆಯಲ್ಲಿ ಲೋಕೋ ಪೈಲಟ್‌ಗಳ ನೇಮಕಕ್ಕೆ ಮುಂದಾಗಿದೆ.
ನೇಮಕ ಪ್ರಕ್ರಿಯೆಗೆ ತಕ್ಷಣವೇ ಚಾಲನೆ ನೀಡುವಂತೆ ರೈಲ್ವೆ ಮಂಡಳಿಯು ವಲಯ ರೈಲ್ವೆಗಳಿಗೆ ಸೂಚನೆ ನೀಡಿದೆ. ಈ ಹುದ್ದೆಗಳ ಭರ್ತಿಗೆ ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಲಿಖಿತ, ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರೈಲು ಕಾರ್ಯಾಚರಣೆಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿತ್ತಿದೆಯಾದರೂ, ಸುರಕ್ಷತಾ ವಿಭಾಗದಲ್ಲಿ 10 ಲಕ್ಷ ಹುದ್ದೆಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಅಂಕಿಅಂಶಗಳು ತಿಳಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.