ADVERTISEMENT

ರೈಲು ಎಂಜಿನ್‌,ಬೋಗಿಗಳಿಗೆ ಎಐ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ: ಭಾರತೀಯ ರೈಲ್ವೆ 

₹15 ಸಾವಿರ ಕೋಟಿ ವೆಚ್ಚದ ಯೋಜನೆಗೆ ಮುಂದಾದ ಭಾರತೀಯ ರೈಲ್ವೆ 

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:45 IST
Last Updated 14 ಸೆಪ್ಟೆಂಬರ್ 2024, 15:45 IST
   

ನವದೆಹಲಿ: ಸುರಕ್ಷತೆ ಹೆಚ್ಚಿಸಲು ರೈಲು ಬೋಗಿಗಳು ಮತ್ತು ಎಂಜಿನ್‌ಗಳಿಗೆ ಸುಮಾರು ₹15 ಸಾವಿರ ಕೋಟಿ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಚಾಲಿತ 75 ಲಕ್ಷ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.


ರೈಲುಗಳ ಹಳಿ ತಪ್ಪಿಸಲು ನಡೆಸಿರುವ ಹಲವು ಶಂಕಿತ ಘಟನೆಗಳು ವರದಿಯಾಗಿರುವಾಗಲೇ ರೈಲ್ವೆ ಇಲಾಖೆ ಇಂತಹ ಕ್ರಮಕ್ಕೆ ಮುಂದಾಗಿದೆ. 

ಮೂರು ತಿಂಗಳಲ್ಲಿ ಸಿ.ಸಿ.ಟಿ.ವಿ.ಗಳನ್ನು ಅಳವಡಿಸಲು ರೈಲ್ವೆಯು ಟೆಂಡರ್‌ ಕರೆಯುವ ಸಾಧ್ಯತೆಯಿದೆ. ಪ್ರಸ್ತುತ ಯೋಜನೆಯ ಪ್ರಕಾರ, ಟೆಂಡರ್‌ ಪಡೆದವರಿಗೆ ಆದೇಶವನ್ನು ನೀಡಿದ ನಂತರ ಒಂದು ವರ್ಷದ ಅವಧಿಯಲ್ಲಿ ಸಿ.ಸಿ.ಟಿ.ವಿಗಳ ಅಳವಡಿಕೆ ಪೂರ್ಣವಾಗುವುದನ್ನು ನಿರೀಕ್ಷಿಸಲಾಗಿದೆ. ಈ ಪ್ರಕ್ರಿಯೆ ತ್ವರಿತಗೊಳಿಸಲು, ಸಿ.ಟಿ.ಟಿ.ವಿ ಕ್ಯಾಮೆರಾಗಳ ಅನೇಕ ಮಾರಾಟಗಾರರನ್ನು ರೈಲ್ವೆಯು ಈ ಕೆಲಸಕ್ಕೆ ನಿಯೋಜಿಸಬಹುದು ಎಂದು ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸುರಕ್ಷತಾ ಕ್ರಮಗಳ ಭಾಗವಾಗಿ, 40,000 ಬೋಗಿಗಳು, 14,000 ಎಂಜಿನ್‌ಗಳು ಮತ್ತು 6,000 ಇಎಂಯುಗಳಲ್ಲಿ ಸಿ.ಸಿ.ಟಿ.ವಿ.ಗಳನ್ನು ಸ್ಥಾಪಿಸಲು ರೈಲ್ವೆ ನಿರ್ಧರಿಸಿದೆ.   


ರೈಲುಗಳ ಎಂಜಿನ್ ಮತ್ತು ಗಾರ್ಡ್ ಕೋಚ್‌ನ ಮುಂಭಾಗ, ಹಿಂಭಾಗ ಮತ್ತು ಬದಿಗಳಲ್ಲಿ ಹಾಗೂ ಬೋಗಿಗಳಲ್ಲಿ ಮತ್ತು ಜಾನುವಾರು ತಡೆಗೂ (ಕ್ಯಾಟಲ್‌ ಗಾರ್ಡ್‌) ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಪ್ರಸ್ತುತ ಯೋಜನೆಯ ಪ್ರಕಾರ, ರೈಲು ಹಳಿಗಳಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಪತ್ತೆಹಚ್ಚಲು ಮತ್ತು ತುರ್ತು ಬ್ರೇಕ್‌ಗಳನ್ನು ಅನ್ವಯಿಸಲು ಚಾಲಕರನ್ನು ಎಚ್ಚರಿಸಲು ಕ್ಯಾಮೆರಾಗಳಲ್ಲಿ ಎ.ಐ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ ಎಂದು ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


ಲೊಕೊಮೊಟಿವ್ ಪೈಲಟ್‌ಗಳು ಅಥವಾ ರೈಲ್ವೆ ಸಿಬ್ಬಂದಿ ರೈಲ್ವೆ ಹಳಿಯಲ್ಲಿ ಮರದ ತುಂಡುಗಳು, ಸಿಗ್ನಲ್ ಟ್ಯಾಂಪರಿಂಗ್ ಮತ್ತು ರೈಲುಗಳನ್ನು ಹಳಿತಪ್ಪಿಸಲು ರೈಲು ಹಳಿಗಳ ಮೇಲೆ ಇರಿಸಲಾದ ಗ್ಯಾಸ್ ಸಿಲಿಂಡರ್‌ಗಳನ್ನು ಪತ್ತೆಹಚ್ಚಿದ 18ಕ್ಕೂ ಹೆಚ್ಚು ಘಟನೆಗಳು ಕಳೆದ ವರ್ಷದ ಜೂನ್‌ನಿಂದ ಇಲ್ಲಿಯವರೆಗೆ ನಡೆದಿವೆ. ರೈಲ್ವೆಯು ಪ್ರಕರಣಗಳನ್ನು ದಾಖಲಿಸಿ, ಕೆಲವು ಕಿಡಿಗೇಡಿಗಳನ್ನು ಬಂಧಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.