ತಿರುವನಂತಪುರ: ಮುಂದಿನ ಕೆಲವು ದಿನಗಳ ವರೆಗೆ ಕೇರಳದಲ್ಲಿ ಮಳೆ ಬಿರುಸುಗೊಳ್ಳುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯು ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 18ರಿಂದ 20ರ ವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಮೇ 18, ಪಟ್ಟಣಂತಿಟ್ಟ, ಅಲಪ್ಪುಳ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಮೇ 19 ಹಾಗೂ ಇನ್ನುಳಿದ ಏಳು ಜಿಲ್ಲೆಗಳಲ್ಲಿ ಮೇ 20ರಂದು ‘ಆರೆಂಜ್ ಅಲರ್ಟ್’ ಘೋಷಿಸಿಲಾಗಿದೆ.
ಆಂಧ್ರಪ್ರದೇಶದಲ್ಲಿ 4 ದಿನ ಮಳೆ ಸಾಧ್ಯತೆ
ಅಮರಾವತಿ: ಆಂಧ್ರಪದೇಶ ಹಾಗೂ ರಾಯಲಸೀಮಾದಲ್ಲಿ ಮೇ 17ರಿಂದ 20ರವರೆಗೆ ಗುಡುಗು, ಮಿಂಚು ಸೇರಿದಂತೆ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಆಂಧ್ರಪ್ರದೇಶದ ಉತ್ತರ, ದಕ್ಷಿಣ ಕರಾವಳಿ ಸೇರಿದಂತೆ ರಾಯಲಸೀಮಾ ಭಾಗದಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಗಂಟೆಗೆ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಿದೆ. ದಕ್ಷಿಣ ಅಂಡಮಾನ್ ಸಾಗರ, ಬಂಗಾಳ ಕೊಲ್ಲಿಯ ದಕ್ಷಿಣ ಪ್ರದೇಶ ನಿಕೋಬಾರ್ ದ್ವೀಪಗಳಿಗೆ ಮೇ 19ರಂದು ನೈರುತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ತಮಿಳುನಾಡಿನ ಚೆನ್ವೈ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಿದ್ದು, ತಾಪಮಾನದಿಂದ ಬಿಡುವು ದೊರೆತಂತಾಗಿದೆ.
ಮಳೆಯು ಜನರಲ್ಲಿ ಹರ್ಷ ತಂದಿದ್ದು, ಮೇ.19ರಂದು ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ವಿವಿಧೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿ ಮತ್ತು ಶ್ರೀಲಂಕಾದ ಮೇಲಿನ ವಾಯು ಚಂಡಮಾರುತ ಪ್ರಭಾವದಿಂದ ಮಳೆಯಾಗಿದ್ದು, ದಕ್ಷಿಣ ತಮಿಳುನಾಡು ಮತ್ತು ಪಶ್ವಿಮ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.