ADVERTISEMENT

ಬುಡಕಟ್ಟು ಸಮುದಾಯದವರ ವಿರುದ್ಧದ ಹೇಳಿಕೆ: ರಾಜಸ್ಥಾನ ಸಚಿವ ಮದನ್ ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:33 IST
Last Updated 18 ಜುಲೈ 2024, 14:33 IST
<div class="paragraphs"><p>ಮದನ್‌ ದಿಲಾವರ್‌</p></div>

ಮದನ್‌ ದಿಲಾವರ್‌

   Pavitra Bhat

ಜೈಪುರ: ಬುಡಕಟ್ಟು ಸಮುದಾಯದವರ ವಿರುದ್ಧದ ಹೇಳಿಕೆಗಾಗಿ ಟೀಕೆಗೆ ಗುರಿಯಾಗಿದ್ದ ರಾಜಸ್ಥಾನದ ಶಿಕ್ಷಣ ಸಚಿವ ಮದನ್‌ ದಿಲಾವರ್‌ ಅವರು ಇಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಗಳವಾರ ವಿಷಾದ ವ್ಯಕ್ತಪಡಿಸಿ, ಕ್ಷಮೆಯಾಚಿಸಿದರು.  

ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದಿರುವ ದಿಲಾವರ್‌ ಅವರು ಈಚೆಗೆ ಬಾನ್ಸ್‌ವಾಡಾ ಕ್ಷೇತ್ರದ ನೂತನ ಸಂಸದ, ರಾಜ್‌ಕುಮಾರ್ ರೋತ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. 

ADVERTISEMENT

ಆದಿವಾಸಿಗಳು ವಿಭಿನ್ನ ಆಚರಣೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುವುದರಿಂದ ಮತ್ತು ಬೇರೆಯದೇ ಆದ ನಂಬಿಕೆ ಹೊಂದಿರುವುದರಿಂದ ಹಿಂದೂಗಳಿಗಿಂತ ಭಿನ್ನರು ಎಂದು ರಾಜ್‌ಕುಮಾರ್‌ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. 

ಅದಕ್ಕೆ ಪ್ರತಿಕ್ರಿಯಿಸುತ್ತಾ ದಿಲಾವರ್, ‘ಭಾರತ್ ಆದಿವಾಸಿ ಪಕ್ಷದ (ಬಿಎಪಿ) ನಾಯಕ (ರಾಜ್‌ಕುಮಾರ್‌) ತಮ್ಮನ್ನು ತಾವು ಹಿಂದೂ ಎಂಬುದಾಗಿ ಭಾವಿಸದಿದ್ದರೆ, ಅವರು ನಿಜವಾಗಿಯೂ ಹಿಂದೂವಿಗೆ ಹುಟ್ಟಿದವರೇ ಎಂಬುದನ್ನು ಪರಿಶೀಲಿಸಲು ಡಿಎನ್‌ಎ ಪರೀಕ್ಷೆ ನಡೆಸಬೇಕು’ ಎಂದಿದ್ದರು.

ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಆದಿವಾಸಿಗಳು, ಜೈಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ಮಾತ್ರವಲ್ಲ, ಡಿಎನ್‌ಎ ಪರೀಕ್ಷೆಗೆ ತಮ್ಮ ರಕ್ತದ ಮಾದರಿಯನ್ನು ನೀಡಿದ್ದರು. ಅದರ ಬೆನ್ನಲ್ಲೇ ‘ಯು– ಟರ್ನ್‌’ ಹೊಡೆದಿದ್ದ ರಾಜ್‌ಕುಮಾರ್, ‘ಬುಡಕಟ್ಟು ಸಮುದಾಯದವರನ್ನು ಯಾವಾಗಲೂ ಹಿಂದೂಗಳೆಂದೇ ಪರಿಗಣಿಸಿದ್ದೇನೆ, ಮುಂದೆಯೂ ಪರಿಗಣಿಸುತ್ತೇನೆ’ ಎಂದಿದ್ದರು.

ವಿಧಾನಸಭಾ ಅಧಿವೇಶನದಲ್ಲಿ ಶಿಕ್ಷಣ ಸಚಿವರು ಮಂಗಳವಾರ ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಎದ್ದು ನಿಂತಾಗ, ವಿರೋಧ ಪಕ್ಷದವರು ಈ ವಿಷಯ ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದರು. ಸಚಿವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. 

‘ಬುಡಕಟ್ಟು ಸಮುದಾಯದವರು ಹಿಂದೂ ಸಮಾಜದ ಭಾಗವೇ ಆಗಿದ್ದಾರೆ. ಅವರ ಬಗ್ಗೆ ನಕಾರಾತ್ಮಕ  ಮಾತುಗಳನ್ನು ಆಡುವುದರಲ್ಲಿ ನನಗೆ ನಂಬಿಕೆ ಇಲ್ಲ. ನನ್ನ ಮಾತುಗಳಿಂದ ವಿಪಕ್ಷದವರು ಅಥವಾ ಬುಡಕಟ್ಟು ಸಮುದಾಯದವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ’ ಎಂದು ದಿಲಾವರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.