ಜೈಪುರ (ಪಿಟಿಐ): ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶಿ ನೆಲದಲ್ಲಿ ಕುಳಿತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾಗಿರುವುದಾಗಿ ಹೇಳುತ್ತಿದ್ದಾರೆ. ಆ ಮೂಲಕ ಇಡಿ ದೇಶವನ್ನೇ ಅವಮಾನಿಸಿದ್ದಾರೆ’ ಎಂದು ರಾಜಸ್ಥಾನದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್ ಅವರ ಮಗ ಅನಿರುದ್ಧ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅನಿರುದ್ಧ್, ಸರಣಿ ಟ್ವೀಟ್‌ಗಳ ಮೂಲಕ ಅಶೋಕ್ ಗೆಹಲೋತ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದಾರೆ.
‘ರಾಹುಲ್ ಗಾಂಧಿ ಹುಚ್ಚರಾಗಿ ಹೋಗಿದ್ದಾರೆ. ಮತ್ತೊಂದು ದೇಶದ ಸಂಸತ್ತಿನಲ್ಲಿ ನಿಂತುಕೊಂಡು ತಮ್ಮದೇ ದೇಶವನ್ನು ಅವಮಾನಿಸುತ್ತಿದ್ದಾರೆ. ಅವರು ಇಟಲಿಯನ್ನೇ ತಮ್ಮ ತವರುನೆಲ ಎಂದು ಭಾವಿಸಿದ್ದಾರೆಯೇ’ ಎಂದು ಟೀಕಿಸಿದ್ದಾರೆ.
‘ರಾಹುಲ್ ಈ ವಿಚಾರವನ್ನೆಲ್ಲಾ ಭಾರತದ ನೆಲದಲ್ಲಿ ಮಾತನಾಡಬಾರದೇಕೆ? ಯುರೋಪಿಯನ್ ನೆಲದಲ್ಲಿ ನಿಂತುಕೊಂಡೇ ಈ ರೀತಿಯ ಟೀಕೆಗಳನ್ನು ಮಾಡಲು ಆದ್ಯತೆ ನೀಡುತ್ತಾರೆಯೇ? ಅವರ ವಂಶವಾಹಿಯು ಇದಕ್ಕೆ ಕಾರಣವಿರಬಹುದೇ’ ಎಂದು ಕಿಡಿಕಾರಿದ್ದಾರೆ.
‘ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟಿದ್ದ ರಾಜಸ್ಥಾನದ ಸಿಆರ್‌ಪಿಎಫ್ ಯೋಧರ ಕುಟುಂಬದವರು ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಫೆಬ್ರುವರಿ 28ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಇವರ ಸಮಸ್ಯೆ ಆಲಿಸುವ ಗೋಜಿಗೆ ಹೋಗುತ್ತಿಲ್ಲ. ಇವೆಲ್ಲಾ ಕ್ಷುಲ್ಲಕ ವಿಚಾರ ಎಂದು ಅವರು ಭಾವಿಸಿದ್ದಾರೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗನ ಹೇಳಿಕೆ ಕುರಿತು ಸಚಿವ ವಿಶ್ವೇಂದ್ರ ಸಿಂಗ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2020ರಲ್ಲಿ ಗೆಹಲೋತ್ ವಿರುದ್ಧ ಬಂಡಾಯವೆದ್ದಿದ್ದ ಸಚಿವರಲ್ಲಿ ವಿಶ್ವೇಂದ್ರ ಸಿಂಗ್ ಸಹ ಇದ್ದರು. ಅದಕ್ಕಾಗಿ ಸಂಪುಟದಿಂದ ವಜಾಗೊಂಡಿದ್ದರು. ಕೊನೆಗೆ ಪಕ್ಷದ ನಾಯಕತ್ವದ ಸಂಧಾನದ ಬಳಿಕ ಮತ್ತೆ ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು.
ಲಂಡನ್‌ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್, ‘ಭಾರತದ ಪ್ರಜಾಪ್ರಭುತ್ವದ ಮೂಲ ರಚನೆಗೆ ಗಂಭೀರ ಸ್ವರೂಪದ ಅಪಾಯ ಬಂದೆರಗಿದೆ. ಅಮೆರಿಕ ಹಾಗೂ ಯುರೋಪ್‌ನಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಇದನ್ನು ಗಮನಿಸುವಲ್ಲಿ ವಿಫಲವಾಗಿವೆ’ ಎಂದು ದೂರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.