ADVERTISEMENT

ಧ್ವನಿವರ್ಧಕ ತೆಗೆಸಲು ನಮ್ಮಲ್ಲಿ ಯೋಗಿಗಳಿಲ್ಲ, ಇರುವುದು ಭೋಗಿಗಳು: ರಾಜ್‌ ಠಾಕ್ರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2022, 8:41 IST
Last Updated 28 ಏಪ್ರಿಲ್ 2022, 8:41 IST
ರಾಜ್‌ ಠಾಕ್ರೆ
ರಾಜ್‌ ಠಾಕ್ರೆ    

ಮುಂಬೈ: ಧಾರ್ಮಿಕ ಸ್ಥಳಗಳಿಂದ, ವಿಶೇಷವಾಗಿ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಸಿದ್ದಕ್ಕೆ ಯೋಗಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶಂಸಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ, ನಮ್ಮಲ್ಲಿ ಈ ಕೆಲಸ ಮಾಡಲು ಯಾವುದೇ ಯೋಗಿಗಳಿಲ್ಲ, ಇರುವುದು ಭೋಗಿಗಳು ಎಂದು ಹೇಳಿದ್ದಾರೆ.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಬುಧವಾರ ಧಾರ್ಮಿಕ ಸ್ಥಳಗಳಲ್ಲಿನ ಸುಮಾರು 11,000 ಧ್ವನಿ ವರ್ಧಕಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ರಾಜ್‌ ಠಾಕ್ರೆ, ‘ಧಾರ್ಮಿಕ ಸ್ಥಳಗಳಿಂದ, ವಿಶೇಷವಾಗಿ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಿದ್ದಕ್ಕಾಗಿ ನಾನು ಯೋಗಿ ಸರ್ಕಾರವನ್ನು ಅಭಿನಂದಿಸುತ್ತೇನೆ ಮತ್ತು ಇದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ,’ ಎಂದು ಹೇಳಿದ್ದಾರೆ.

ADVERTISEMENT

ಮುಂದುವರಿದು, ‘ದುರದೃಷ್ಟವಶಾತ್ ಮಹಾರಾಷ್ಟ್ರದಲ್ಲಿ ನಮಗೆ ಯಾವುದೇ 'ಯೋಗಿಗಳು' ಇಲ್ಲ; ನಮ್ಮಲ್ಲಿರುವುದು 'ಭೋಗಿಗಳು’ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರದ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಜ್‌ ಠಾಕ್ರೆ, ‘ಮುಸ್ಲಿಂ ಸಮುದಾಯದವರು ಧ್ವನಿವರ್ಧಕಗಳ ಮೂಲಕ ಮಸೀದಿಗಳಲ್ಲಿ ಆಜಾನ್ ನುಡಿಸುತ್ತಿರುವುದು ಸರಿಯಲ್ಲ. ಅವರು ಬದಲಾಗದಿದ್ದರೆ ಮಸೀದಿಗಳ ಮುಂದೆ ಅವರ ಧ್ವನಿವರ್ಧಕದ ಎರಡು ಪಟ್ಟು ಹನುಮಾನ್ ಚಾಲೀಸಾ ಹಾಕುತ್ತೇವೆ’ ಎಂದು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.