ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ (ಎಂಎನ್‌ಎಸ್) ರಾಜ್ ಠಾಕ್ರೆ ಅವರು ಔರಂಗಾಬಾದ್‌ನಲ್ಲಿ ನೀಡಿರುವ ಹೇಳಿಕೆ ಸಮಾಜದಲ್ಲಿ ಒಡಕು ಸೃಷ್ಟಿಸುವ ಉದ್ದೇಶದಿಂದ ಕೂಡಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಲ್ಸೆ ಪಾಟೀಲ್ ಹೇಳಿದ್ದಾರೆ. ಜತೆಗೆ, ರಾಜ್ ಠಾಕ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸುಳಿವನ್ನೂ ನೀಡಿದ್ದಾರೆ.
ಔರಂಗಾಬಾದ್‌ನಲ್ಲಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ್ದ ರಾಜ್ ಠಾಕ್ರೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲು ನೀಡಿದ್ದ ಮೇ 3ರ ಗಡುವಿಗೆ ಬದ್ಧರಾಗಿ ಇರುವುದಾಗಿಯೂ ಹೇಳಿದ್ದರು.
ಶರದ್ ಪವಾರ್ ಮಹಾರಾಷ್ಟ್ರದಲ್ಲಿ ಜಾತಿ ರಾಜಕೀಯ ಮಾಡುತ್ತಿದ್ದಾರೆ. ‘ಹಿಂದೂ’ ಎಂಬ ಪದ ಅವರಿಗೆ ಅಲರ್ಜಿ ಉಂಟುಮಾಡುತ್ತಿದೆ ಎಂದು ರಾಜ್ ಠಾಕ್ರೆ ಹೇಳಿದ್ದರು.
‘ಅವರ (ರಾಜ್ ಠಾಕ್ರೆ) ಹೇಳಿಕೆಯು ಸಮಾಜದಲ್ಲಿ ಒಡಕು ಮೂಡಿಸುವ ಮತ್ತು ದ್ವೇಷ ಬಿತ್ತುವ ಉದ್ದೇಶದಿಂದ ಕೂಡಿದೆ. ಪೊಲೀಸರು ಅವರ ಭಾಷಣವನ್ನು ಪೂರ್ತಿಯಾಗಿ ಕೇಳಿ, ಆಕ್ಷೇಪಾರ್ಹ ಹೇಳಿಕೆಯನ್ನು ಪರಿಶೀಲಿಸಲಿದ್ದಾರೆ. ಇದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ದಿಲೀಪ್ ವಲ್ಸೆ ಪಾಟೀಲ್ ತಿಳಿಸಿದ್ದಾರೆ.
ರಾಜ್ ಠಾಕ್ರೆ ಅವರ ರ್‍ಯಾಲಿಗೆ ಅನುಮತಿ ನೀಡುವಾಗ ಯಾವ ಷರತ್ತುಗಳನ್ನು ವಿಧಿಸಲಾಗಿತ್ತು, ಯಾವುದರ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಔರಂಗಾಬಾದ್ ಪೊಲೀಸ್ ಆಯುಕ್ತರು ಪರಿಶೀಲಿಸಲಿದ್ದಾರೆ. ಕಾನೂನು ಕ್ರಮ ಕೈಗೊಂಡು ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಿದ್ದಾರೆ. ನಾಳೆ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ. ಅಷ್ಟರೊಳಗೆ ಔರಂಗಾಬಾದ್‌ನಿಂದ ವರದಿಯನ್ನೂ ಪಡೆಯಲಿದ್ದೇವೆ. ನಂತರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜನರು ಶಾಂತಿ ಕಾಪಾಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.
‘ಮುಸ್ಲಿಂ ಸಮುದಾಯದವರು ಧ್ವನಿವರ್ಧಕಗಳ ಮೂಲಕ ಮಸೀದಿಗಳಲ್ಲಿ ಆಜಾನ್ ಕೂಗುವುದು ಸರಿಯಲ್ಲ. ಅವರು ಬದಲಾಗದಿದ್ದರೆ ಮಸೀದಿಗಳ ಮುಂದೆ ಅವರ ಧ್ವನಿವರ್ಧಕದ ಎರಡು ಪಟ್ಟು ಹನುಮಾನ್ ಚಾಲೀಸಾ ಹಾಕಲಿದ್ದೇವೆ’ ಎಂದು ರಾಜ್ ಠಾಕ್ರೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.