ADVERTISEMENT

ರಾಜಸ್ಥಾನ ವಿಧಾನಸಭೆ ಚುನಾವಣೆ: ಕುಡಿಗಳ ಟಿಕೆಟ್‌ಗೆ ರಾಜಕಾರಣಿಗಳ ಲಾಬಿ

ಎಲ್ಲ ಪಕ್ಷಗಳಿಗೂ ಅಂಟಿದ ಜಾಡ್ಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 18:42 IST
Last Updated 25 ಅಕ್ಟೋಬರ್ 2018, 18:42 IST
   

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಂಡಿದ್ದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಅನೇಕ ಹಿರಿಯ ನಾಯಕರು ತಮ್ಮ ಕುಟುಂಬದ ಕುಡಿಗಳಿಗೆ ಟಿಕೆಟ್‌ ಕೊಡಿಸಲು ಲಾಬಿ ನಡೆಸಿದ್ದಾರೆ.

70–80 ವರ್ಷ ವಯಸ್ಸಿನ ಆಸುಪಾಸಿನಲ್ಲಿರುವ ರಾಜಕಾರಣಿಗಳು ತಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಕುಟುಂಬ ಸದಸ್ಯರಿಗಾಗಿ ಟಿಕೆಟ್‌ ತ್ಯಾಗ ಮಾಡಲು ಮುಂದಾಗಿದ್ದಾರೆ.

ಬಿಜೆಪಿ ಶಾಸಕರಾದ ನಂದಲಾಲ್ ಮೀನಾ, ದೇವಿಸಿಂಗ್‌ ಭಟ್ಟಿ , ಕಿಸ್ನಾ ರಾಮ್‌ ನಾಯಿ ಮತ್ತು ಗೋಪಾಲ್‌ ಜೋಶಿ ತಮ್ಮ ಬದಲು ಮೊಮ್ಮಕ್ಕಳಿಗೆ ಟಿಕೆಟ್‌ ನೀಡುವಂತೆ ಕೇಳಿದ್ದಾರೆ. ಅವರಿಗೆ ಟಿಕೆಟ್‌ ದೊರೆಯುವುದು ಖಚಿತವಾಗಿದೆ.

ADVERTISEMENT

ಮಾಜಿ ಉಪ ರಾಷ್ಟ್ರಪತಿ ದಿವಂಗತ ಭೈರೋನ್‌ ಸಿಂಗ್‌ ಶೇಖಾವತ್‌ ಅವರ ಮೊಮ್ಮಗ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಭಿಮನ್ಯು ರಜ್ವಿಗೆ ಟಿಕೆಟ್‌ ನೀಡುವಂತೆ ಶೇಖಾವತ್‌ ಕುಟುಂಬವು ವರಿಷ್ಠರ ಮೇಲೆ ಒತ್ತಡ ಹೇರುತ್ತಿದೆ.

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ನಂದಲಾಲ್‌ ಮೀನಾ, ಗಜೇಂದ್ರ ಸಿಂಗ್‌ ಖಿಮ್ಸರ್‌ ಮತ್ತು ಜಸ್ವಂತ್‌ ಸಿಂಗ್‌ ಕೂಡ ತಮ್ಮ ವಾರಸುದಾರರಿಗಾಗಿ ಟಿಕೆಟ್‌ ತ್ಯಾಗಕ್ಕೆ ಸಿದ್ಧರಾಗಿದ್ದಾರೆ.

ಅಷ್ಟೇ ಏಕೆ, ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್‌ ಲಾಲ್‌ ಮೀನಾ ಅವರಿಗೂ ಕುಟುಂಬ ರಾಜಕಾರಣದ ವ್ಯಾಮೋಹ ಕಾಡುತ್ತಿದೆ. ತಮ್ಮ ಮಗನಿಗೆ ಟಿಕೆಟ್‌ ಕೊಡಿಸಲು ಅವರು ಲಾಬಿ ಮಾಡುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗೆಲ್ಲುವ ಮತ್ತು ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಪಕ್ಷದ ಟಿಕೆಟ್‌ ನೀಡುವುದಾಗಿ ಬಿಜೆಪಿಯ ಚುನಾವಣಾ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಸ್ಪಷ್ಟವಾಗಿ ಹೇಳಿದ್ದಾರೆ.

ಕಾಂಗ್ರೆಸ್‌ ಕೂಡ ಹೊರತಲ್ಲ

ಕುಟುಂಬ ರಾಜಕಾರಣದ ವ್ಯಾಮೋಹ ಬಿಜೆಪಿಗೆ ಸೀಮಿತವಾಗಿಲ್ಲ. ಇದಕ್ಕೆ ಕಾಂಗ್ರೆಸ್‌ ಕೂಡ ಹೊರತಾಗಿಲ್ಲ.

ಮಮತಾ ಶರ್ಮಾ, ಭಂವರ್‌ ಲಾಲ್‌ ಮೇಘ್ವಾಲ್‌, ಅಲ್ಲಾವುದ್ದೀನ್‌ ಝಾಡ್‌ ಅವರಂತಹ ಹಿರಿಯ ನಾಯಕರು ಮಕ್ಕಳು, ಮೊಮ್ಮಕ್ಕಳಿಗಾಗಿ ತಮ್ಮ ರಾಜಕೀಯ ಆಸೆ, ಆಕಾಂಕ್ಷೆಗಳನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ತಮ್ಮ ಪುತ್ರ ವೈಭವ್‌ಗೆ ಹ್ಲೋಟ್‌ಗೆ ಟಿಕೆಟ್‌ ಕೊಡಿಸಲು ಕಸರತ್ತು ನಡೆಸಿದ್ದಾರೆ.

ಭಂವಾರಿ ದೇವಿ ಲೈಂಗಿಕ ಹಗರಣದ ಆರೋಪಿ ಮತ್ತು ಮಾಜಿ ಸಚಿವ ಮಹಿಪಾಲ್ ಮದೆರ್ನಾ ಅವರ ಪುತ್ರಿ ದಿವ್ಯಾ ಮದೆರ್ನಾ ಕೂಡಾ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ರಾಜಸ್ಥಾನ ಚುನಾವಣೆಯಲ್ಲಿ ನಿರ್ಣಾಯಕ ಜಾಟ್‌ ಸಮುದಾಯಕ್ಕೆ ದಿವ್ಯಾ ಸೇರಿದ್ದಾರೆ. ಕಾಂಗ್ರೆಸ್‌ ಪಕ್ಷ ಕೂಡ ರಾಜಸ್ಥಾನದಲ್ಲಿ ಜಾಟ್‌ ಸಮುದಾಯವನ್ನು ಓಲೈಸುವ ಅನಿವಾರ್ಯತೆ ಎದುರಿಸುತ್ತಿದೆ.

ಮಕ್ಕಳು, ಮೊಮ್ಮಕ್ಕಳು ಮತ್ತು ಬಂಧುಗಳಿಗೆ ಟಿಕೆಟ್‌ ಕೇಳುತ್ತಿರುವ ಪ್ರಬಲ ಕೋಮು, ಸಮುದಾಯಗಳ ನಾಯಕರು ಪಕ್ಷದ ವರಿಷ್ಠರ ಮುಂದೆ ತಮ್ಮ ಜಾತಿಯ ಲೆಕ್ಕಾಚಾರ ಬಿಚ್ಚಿಡುತ್ತಿದ್ದಾರೆ. ವರಿಷ್ಠರ ಮನವರಿಕೆಯ ಕಸರತ್ತು ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.