ADVERTISEMENT

ಗಾದಿಗಾಗಿ ಬೀದಿ ಕಾದಾಟ; ಗೆಹ್ಲೋಟ್‌ಗೆ ಹೈಕಮಾಂಡ್‌ ಒಲವು, ಹಿಂದೆ ಸರಿಯದ ಪೈಲಟ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 20:27 IST
Last Updated 13 ಡಿಸೆಂಬರ್ 2018, 20:27 IST
   

ಜೈಪುರ:ರಾಜಸ್ಥಾನ ವಿಧಾನಸಭೆಯ ಫಲಿತಾಂಶ ಪ್ರಕಟವಾಗಿ ಎರಡು ದಿನಗಳ ಬಳಿಕವೂ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ.

ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ರಾಜ್ಯ ಘಟಕದ ಅಧ್ಯಕ್ಷ ಸಚಿನ್‌ ಪೈಲಟ್‌ ನಡುವೆ ಹಗ್ಗಜಗ್ಗಾಟ ತೀವ್ರಗೊಂಡಿದೆ. ಗೆಹ್ಲೋಟ್‌ ಅವರನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂಬ ವದಂತಿ ಪೈಲಟ್‌ ಬೆಂಬಲಿಗರನ್ನು ಕೆರಳಿಸಿದೆ. ರಾಜಸ್ಥಾನದ ಹಲವು ಕಡೆಗಳಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಪೈಲಟ್‌ ಅವರ ಗುಜ್ಜರ್‌ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಕರೌಲಿ ಮತ್ತು ದೌಸಾ ಜಿಲ್ಲೆಗಳಲ್ಲಿ ರಸ್ತೆ ತಡೆ ನಡೆಸಲಾಗಿದೆ. ಗುಜ್ಜರ್‌ ಸಮುದಾಯ ಪ್ರಬಲವಾಗಿರುವ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಜಾಲುಪುರದ ಪೈಲಟ್‌ ಮನೆಯ ಮುಂದೆಯೂ ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದಾರೆ.

ADVERTISEMENT

ದಿನವಿಡೀ ಕಸರತ್ತು: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆ ಪಕ್ಷದ ಅಧ್ಯಕ್ಷರಾಗಿ ನೇಮಕವಾದ ಬಳಿಕ ರಾಹುಲ್‌ಗೆ ನಿಜವಾದ ಅಗ್ನಿ
ಪರೀಕ್ಷೆ ಎನಿಸಿದೆ. ಅವರು ಗುರುವಾರವಿಡೀ ‍ಪಕ್ಷದ ಹಿರಿಯ ಮುಖಂಡರ ಜತೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ರಾಜಸ್ಥಾನದ ಗೆಹ್ಲೋಟ್‌ ಮತ್ತು ಪೈಲಟ್‌ ಹಾಗೂ ಮಧ್ಯ ಪ್ರದೇಶದ ಕಮಲನಾಥ್‌ ಮತ್ತು ಜ್ಯೋತಿರಾದಿತ್ಯ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.

ಪಕ್ಷದ ವೀಕ್ಷಕರು ಮೂರೂ ರಾಜ್ಯಗಳ ಕಾಂಗ್ರೆಸ್‌ ಶಾಸಕರನ್ನು ಭೇಟಿಯಾಗಿ ಅವರ ಮನದಿಂಗಿತ ಏನು ಎಂಬುದನ್ನು ಅರಿತುಕೊಂಡಿದ್ದಾರೆ. ಈ ವರದಿಗಳೂ ರಾಹುಲ್‌ ಕೈ ಸೇರಿವೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಸಹೋದರಿ ಪ್ರಿಯಾಂಕಾ ಅವರೂ ನಿರ್ಧಾರ ಕೈಗೊಳ್ಳಲು ನೆರವಾಗುವುದಕ್ಕಾಗಿ ರಾಹುಲ್‌ ನಿವಾಸದಲ್ಲಿ ನಡೆದ ಸಮಾಲೋಚನೆಯಲ್ಲಿ ಭಾಗಿಯಾಗಿದ್ದಾರೆ.

ಪೈಲಟ್‌ಗೆ ಆರ್‌ಎಲ್‌ಪಿ ಬೆಂಬಲ

ಗೆಹ್ಲೋಟ್‌ ಅವರನ್ನು ಮುಖ್ಯಮಂತ್ರಿ ಮಾಡಬಾರದು ಎಂದು ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷದ (ಆರ್‌ಎಲ್‌ಪಿ) ಶಾಸಕ ಹನುಮಾನ್‌ ಬೇನಿವಾಲ್‌ ಅವರು ರಾಹುಲ್‌ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. ಜಾಟ್‌ ಸಮುದಾಯದ ಹಲವು ಮುಖಂಡರ ರಾಜಕೀಯ ಭವಿಷ್ಯ ಕಮರಲು ಗೆಹ್ಲೋಟ್‌ ಅವರೇ ಕಾರಣ ಎಂದು ಟ್ವಿಟರ್‌ನಲ್ಲಿ ಪ್ರಕಟಿಸಿದ ವಿಡಿಯೊದಲ್ಲಿ ಬೇನಿವಾಲ್‌ ಆರೋಪಿಸಿದ್ದಾರೆ. ಪೈಲಟ್‌ ಮುಖ್ಯಮಂತ್ರಿಯಾಗುವುದಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಅವರು ಹೇಳಿದ್ದಾರೆ. ಬೇನಿವಾಲ್‌ ಅವರು ಜಾಟ್‌ ಸಮುದಾಯದ ಪ್ರಮುಖ ಮುಖಂಡ. ಅವರ ಪಕ್ಷ ಮೂವರು ಶಾಸಕರನ್ನು ಹೊಂದಿದೆ.

40 ಶಾಸಕರ ರಾಜೀನಾಮೆ ಬೆದರಿಕೆ

‘ಪೈಲಟ್‌ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಪಕ್ಷ ಸಿದ್ಧವಿದ್ದರೂ ಅವರು ಅದನ್ನು ತಿರಸ್ಕರಿಸಿದ್ದಾರೆ. ಅಲ್ಲದೆ, ಪೈಲಟ್‌ಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಅವರ ಬೆಂಬಲಿಗರಾಗಿರುವ 40 ಶಾಸಕರು ರಾಜೀನಾಮೆ ನೀಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ದಿನವಿಡೀ ಆಯ್ಕೆ ಕಸರತ್ತು

ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆ ಪಕ್ಷದ ಅಧ್ಯಕ್ಷರಾಗಿ ನೇಮಕವಾದ ಬಳಿಕ ರಾಹುಲ್‌ಗೆ ನಿಜವಾದ ಅಗ್ನಿಪರೀಕ್ಷೆ ಎನಿಸಿದೆ. ಅವರು ಗುರುವಾರವಿಡೀ ‍ಪಕ್ಷದ ಹಿರಿಯ ಮುಖಂಡರ ಜತೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ರಾಜಸ್ಥಾನದ ಗೆಹ್ಲೋಟ್‌ ಮತ್ತು ಪೈಲಟ್‌ ಹಾಗೂ ಮಧ್ಯ ಪ್ರದೇಶದ ಕಮಲನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.

ಪಕ್ಷದ ವೀಕ್ಷಕರು ಮೂರೂ ರಾಜ್ಯಗಳ ಕಾಂಗ್ರೆಸ್‌ ಶಾಸಕರನ್ನು ಭೇಟಿಯಾಗಿ ಅವರ ಮನದಿಂಗಿತ ಏನು ಎಂಬುದನ್ನು ಅರಿತುಕೊಂಡಿದ್ದಾರೆ. ಈ ವರದಿಗಳೂ ರಾಹುಲ್‌ ಕೈ ಸೇರಿವೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಸಹೋದರಿ ಪ್ರಿಯಾಂಕಾ ಅವರೂ ನಿರ್ಧಾರ ಕೈಗೊಳ್ಳಲು ನೆರವಾಗುವುದಕ್ಕಾಗಿ ರಾಹುಲ್‌ ನಿವಾಸದಲ್ಲಿ ನಡೆದ ಸಮಾಲೋಚನೆಯಲ್ಲಿ ಭಾಗಿಯಾಗಿದ್ದಾರೆ.

ರಾಜಸ್ಥಾನಕ್ಕೆ ಗೆಹ್ಲೋಟ್‌ ಮತ್ತು ಮಧ್ಯ ಪ್ರದೇಶಕ್ಕೆ ಕಮಲನಾಥ್‌ ಅವರ ಹೆಸರು ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನಿಬ್ಬರು ಆಕಾಂಕ್ಷಿಗಳು ತೀವ್ರ ಪ್ರತಿರೋಧ ಒಡ್ಡಿದ್ದರಿಂದ ಹೆಸರು ಘೋಷಣೆಯನ್ನು ತಡೆ ಹಿಡಿಯಲಾಗಿದೆ.

ಮೂವರ ಸ್ಪರ್ಧೆ

ಛತ್ತೀಸಗಡದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಭೂಪೇಶ್‌ ಬಘೆಲ್‌, ಹಿಂದಿನ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದ ಟಿ.ಎಸ್‌. ಸಿಂಹದೇವ್‌ ಮತ್ತು ಹಿಂದುಳಿದ ವರ್ಗಗಳ ಪ್ರಭಾವಿ ಮುಖಂಡ ತಾಮ್ರಧ್ವಜ ಸಾಹು ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರವಾಗಿ ಸೆಣಸಾಡುತ್ತಿದ್ದಾರೆ.

ಹಿರಿತಲೆಗೆ ಸಿ.ಎಂ. ಕಿರೀಟ

ಮಧ್ಯಪ್ರದೇಶ ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ರಾಹುಲ್‌ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಹಿರಿಯ ಮುಖಂಡ 72 ವರ್ಷದ ಕಮಲನಾಥ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಕಮಲನಾಥ್‌ ಮತ್ತು ಇನ್ನೊಬ್ಬ ಆಕಾಂಕ್ಷಿ ಜ್ಯೋತಿರಾದಿತ್ಯ ಸಿಂಧಿಯಾ ಜತೆಗಿದ್ದ ಫೋಟೊವನ್ನು ರಾಹುಲ್‌ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಖ್ಯಾತ ಕಾದಂಬರಿಕಾರ ಲಿಯೊ ಟಾಲ್‌ಸ್ಟಾಯ್‌ ಅವರ ಪ್ರಸಿದ್ಧ ಹೇಳಿಕೆ ‘ಸಂಯಮ ಮತ್ತು ಸಮಯ ಅತ್ಯಂತ ಪ್ರಭಾವಿ ಯೋಧರು’ ಎಂಬುದನ್ನು ಈ ಚಿತ್ರಕ್ಕೆ ಶೀರ್ಷಿಕೆಯಾಗಿ ಕೊಟ್ಟಿದ್ದಾರೆ.

ಅದೇ ಚಿತ್ರವನ್ನು ಸಿಂಧಿಯಾ ಕೂಡ ಟ್ವೀಟ್‌ ಮಾಡಿದ್ದಾರೆ. ‘ಇದೊಂದು ರೇಸ್‌ ಅಲ್ಲ. ಇದು ಕುರ್ಚಿಯ ಪ್ರಶ್ನೆಯೂ ಅಲ್ಲ. ಮಧ್ಯ ಪ್ರದೇಶದ ಜನರ ಸೇವೆಗಾಗಿ ನಾವು ಇದ್ದೇವೆ’ ಎಂದು ಈ ಚಿತ್ರಕ್ಕೆ ಅವರು ಶೀರ್ಷಿಕೆ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.