ಜೈಪುರ: ರಾಜ್ಯದ ಜನರು ಬಿಜೆಪಿಗೆ ಮತ ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಬೆಂಬಲ ನೀಡಿದ್ದಾರೆ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ ವಿಧಾನಸಭೆಯ 199 ಸ್ಥಾನಗಳಿಗೆ ಇಂದು (ನವೆಂಬರ್ 25 ರಂದು) ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಸಂಜೆ 5ರ ಹೊತ್ತಿಗೆ ಶೇ 68ರಷ್ಟು ನಾಗರಿಕರು ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮಾತನಾಡಿರುವ ಅವರು, ರಾಜಸ್ಥಾನದಲ್ಲಿ ಈ ಬಾರಿ ತಮ್ಮ ಪಕ್ಷ ಅಧಿಕಾರಕ್ಕೇರಲಿದೆ. ರಾಜ್ಯದ ಜನರು ಕಾಂಗ್ರೆಸ್‌ನ ಸುಳ್ಳು ಭರವಸೆಗಳನ್ನು ಧಿಕ್ಕರಿಸಿದ್ದಾರೆ ಎಂದಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆಯೂ ಆಗಿರುವ ರಾಜೇ, 'ಕಮಲ ಅರಳಲಿದೆ'. ಚುನಾವಣೆ ಫಲಿತಾಂಶವು ಕಾಂಗ್ರೆಸ್ ಪಕ್ಷವನ್ನು ದಿಗ್ಭ್ರಮೆಗೊಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕೇಸರಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ಹೇಳಿರುವ ಅವರು, ಎಲ್ಲ ಮತದಾರರಿಗೆ, ಮುಖ್ಯವಾಗಿ ಮೊದಲ ಸಲ ಮತ ಚಲಾಯಿಸಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ರಾಜೇ, ಝಲ್ವಾರ್ ಜಿಲ್ಲೆಯ ಝಲರಾಪಾಟನ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಡಿಸೆಂಬರ್ 3ಕ್ಕೆ ಫಲಿತಾಂಶ
ರಾಜಸ್ಥಾನ ವಿಧಾನಸಭೆಯು 200 ಸದಸ್ಯ ಬಲ ಹೊಂದಿದ್ದು, ಒಂದು ಸ್ಥಾನ ಹೊರತುಪಡಿಸಿ ಉಳಿದ 199 ಕ್ಷೇತ್ರಗಳಿಗೆ ಇಂದು (ನವೆಂಬರ್ 25ರಂದು) ಮತದಾನ ನಡೆಯುತ್ತಿದೆ.
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗುರ್ಮೀತ್ ಸಿಂಗ್ ಕೊನೂರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಶ್ರೀಗಂಗಾನಗರದ ಕರಣ್‌ಪುರ ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. ಡಿಸೆಂಬರ್ 3ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.