ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನ ಇಂದು (ಶನಿವಾರ) ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡಿದ್ದು, ಸಂಜೆ 6 ಗಂಟೆವರೆಗೆ ನಡೆಯಲಿದೆ.
ರಾಜ್ಯದಾದ್ಯಂತ ಒಟ್ಟು 51,507 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ರಾಜಸ್ಥಾನ ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.
ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರು ಬಲೋತ್ರಾದಲ್ಲಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಮತದಾನ ಮಾಡಿದವರಲ್ಲಿ ಮೊದಲಿಗರಾಗಿದ್ದಾರೆ.
ರಾಜಸ್ಥಾನವು ಒಟ್ಟು 200 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಶ್ರೀಗಂಗಾನಗರ ಜಿಲ್ಲೆಯ ಕರಣಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಗುರ್ಮೀತ್ ಸಿಂಗ್ ಅವರ ನಿಧನದ ಕಾರಣ ಈ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿರುವುದರಿಂದ ಇಂದು 199 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಒಟ್ಟು 1,862 ಅಭ್ಯರ್ಥಿಗಳು ಕಣದಲ್ಲಿದ್ದು 5,25,38,105 ಮತದಾರರು ಇದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ಧೊಟಾಸರಾ, ಪಕ್ಷದ ನಾಯಕ ಸಚಿನ್ ಪೈಲಟ್ ಸೇರಿದಂತೆ ಕೆಲವು ಸಚಿವರು ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ.
ರಾಜ್ಯದಾದ್ಯಂತ ಸುಮಾರು 1.70 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 70,000 ರಾಜಸ್ಥಾನ ಪೊಲೀಸ್ ಸಿಬ್ಬಂದಿ, 18,000 ಗೃಹ ರಕ್ಷಕರು, 2,000 ರಾಜ್ಯ ಗಡಿ ಗೃಹ ರಕ್ಷಕರು ಹಾಗೂ 15,000 ಇತರ ರಾಜ್ಯಗಳ (ಉತ್ತರ ಪ್ರದೇಶ, ಗುಜರಾತ್, ಹರಿಯಾಣ, ಮಧ್ಯಪ್ರದೇಶ) ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಸರ್ಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ವಿರೋಧ ಪಕ್ಷ ಬಿಜೆಪಿ ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮುನ್ನ ರಾಜಸ್ಥಾನದಲ್ಲಿ ಅಧಿಕಾರ ಸ್ಥಾಪಿಸುವ ಪ್ರಯತ್ನದಲ್ಲಿದೆ.
ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.