ಜೈಪುರ: ವಿಶ್ವಾಸ ಮತಯಾಚನೆ ವೇಳೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮತ ಹಾಕಿ ಎಂದು ಬಹುಜನ ಸಮಾಜವಾದಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಆರು ಶಾಸಕರಿಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸೂಚನೆ ನೀಡಿದ್ದಾರೆ.
ಶುಕ್ರವಾರ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ವಿಶ್ವಾಸಮತ ಯಾಚನೆ ಅಥವಾ ಇನ್ಯಾವುದೇ ನಡೆ ವಿರುದ್ಧ ಮತ ಚಲಾಯಿಸುವಂತೆ Xನೇ ಅನುಸೂಚನೆಯ 2 (1) (ಎ) ಪ್ರಕಾರ ಸೂಚನೆ ನೀಡಲಾಗಿದೆ. ಇದನ್ನು ಅನುಸರಿಸದೇ ಇದ್ದರೆ Xನೇ ಅನುಸೂಚನೆಯ 2(1)(ಬಿ) ಪ್ರಕಾರ ಅನರ್ಹ ಮಾಡಲಾಗುವುದು ಎಂದು ಬಿಎಸ್‌ಪಿ ಹೇಳಿದೆ.
ಬಿಎಸ್‌ಪಿಯ ಆರು ಶಾಸಕರು ರಾಜಸ್ಥಾನದಲ್ಲಿ ಕಾಂಗ್ರೆಸ್ ಜೊತೆ ವಿಲೀನಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಸಂದೀಪ್ ಯಾದವ್, ವಾಜೀಬ್ ಅಲಿ, ದೀಪ್‌ಚಂದ್ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಮತ್ತು ರಾಜೇಂದ್ರ ಗುದಾ 2018ರಲ್ಲಿ ಬಿಎಸ್‌ಪಿ ಅಭ್ಯರ್ಥಿಗಳಾಗಿ ಚುನಾವಣೆ ಸ್ಪರ್ಧಿಸಿ ಚುನಾವಣೆ ಗೆದ್ದಿದ್ದರು. ಆದಾಗ್ಯೂ 2019 ಸೆಪ್ಟೆಂಬರ್‌ನಲ್ಲಿ ಈ ಆರು ಶಾಸಕರು ಕಾಂಗ್ರೆಸ್ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.