ADVERTISEMENT

ರಾಜಸ್ಥಾನ ಸಂಪುಟ ಪುನರ್‌ರಚನೆ: 12 ಮಂದಿ ಹೊಸಬರು, ಪೈಲಟ್ ಬಣದಿಂದ ಐವರಿಗೆ ಅವಕಾಶ

ಪಿಟಿಐ
Published 21 ನವೆಂಬರ್ 2021, 2:02 IST
Last Updated 21 ನವೆಂಬರ್ 2021, 2:02 IST
ಸಚಿನ್ ಪೈಲಟ್ (ಪಿಟಿಐ ಚಿತ್ರ)
ಸಚಿನ್ ಪೈಲಟ್ (ಪಿಟಿಐ ಚಿತ್ರ)   

ಜೈಪುರ: ರಾಜಸ್ಥಾನ ಸಚಿವ ಸಂಪುಟ ಪುನರ್‌ರಚನೆ ವೇಳೆ 12 ಮಂದಿ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಈ ಪೈಕಿ ಸಚಿನ್ ಪೈಲಟ್ ಬಣದ ಐವರಿಗೆ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಶೋಕ್ ಗೆಹಲೋತ್ ನೇತೃತ್ವದ ಸಂಪುಟದಲ್ಲಿ 30 ಸಚಿವರು ಇರಲಿದ್ದಾರೆ. ಇದರಲ್ಲಿ ಈ ಹಿಂದೆಯೇ ರಾಜೀನಾಮೆ ನೀಡಿದ್ದ 18 ಮಂದಿಯೂ ಇರಲಿದ್ದಾರೆ ಎನ್ನಲಾಗಿದೆ.

ಎಸ್‌ಸಿ ಸಮುದಾಯದ ಮೂವರಿಗೆ ಸಂಪುಟ ದರ್ಜೆ ನೀಡಲಾಗುತ್ತಿದೆ. ರಾಜ್ಯದ ಹೊಸ ಸಂಪುಟವು ಇದೇ ಮೊದಲ ಬಾರಿಗೆ ನಾಲ್ವರು ಎಸ್‌ಸಿ ಸಮುದಾಯದವರನ್ನು ಹೊಂದಿರಲಿದೆ. ಎಸ್‌ಟಿ ಸಮುದಾಯದ ಮೂವರಿಗೂ ಸಚಿವ ಸ್ಥಾನ ನೀಡಲಾಗುತ್ತಿದೆ. ಮೂವರು ಮಹಿಳೆಯರಿಗೂ ಸ್ಥಾನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಹೊಸದಾಗಿ ಸಚಿವರಾಗುತ್ತಿರುವವರ ಪೈಕಿ ಹೇಮರಾಮ್ ಚೌಧರಿ, ಮಹೇಂದ್ರಜಿತ್ ಸಿಂಗ್ ಮಾಳವೀಯ, ರಾಮ್‌ಲಾಲ್ ಜಾಟ್, ಮಹೇಶ್ ಜೋಶಿ, ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ, ಮಮತಾ ಭೂಪೇಶ್ ಮೇಘವಾಲ್ ಹಾಗೂ ಶಕುಂತಲಾ ರಾವತ್ ಸಂಪುಟ ದರ್ಜೆಯ ಸ್ಥಾನಮಾನ ಪಡೆಯಲಿದ್ದಾರೆ. ಉಳಿದಂತೆ ಝಾಹಿದಾ, ಬ್ರಿಜೇಂದ್ರ ಸಿಂಗ್ ಓಲಾ, ರಾಜೇಂದ್ರ ದುರಾ ಹಾಗೂ ಮುರಲಿಲಾಲ್ ಮೀನಾ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.

ಸಚಿನ್ ಪೈಲಟ್ ಬಣದಿಂದ ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ ಹಾಗೂ ಹೇಮರಾಮ್‌ಗೆ ಸಂಪುಟ ದರ್ಜೆ ದೊರೆತಿದೆ. ಬ್ರಿಜೇಂದ್ರ ಓಲಾ ಹಾಗೂ ಮುರಾರಿ ಮೀನಾಗೆ ಸಚಿವ ಸ್ಥಾನ ದೊರೆತಿದೆ.

ಪೈಲಟ್ ಬಣದ ವಿಶ್ವೇಂದ್ರ ಸಿಂಗ್ ಹಾಗೂ ರಮೇಶ್ ಮೀನಾ ಅವರನ್ನು ಕಳೆದ ವರ್ಷದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಪುಟದಿಂದ ವಜಾಗೊಳಿಸಲಾಗಿತ್ತು.

ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ನೇತೃತ್ವದ ಸಂಪುಟ ಸಭೆಯು ಶನಿವಾರ ಸಂಜೆ ಜೈಪುರದ ಅವರ ನಿವಾಸದಲ್ಲಿ ನಡೆದಿತ್ತು. ಅದಾದ ಬೆನ್ನಲ್ಲೇ ಸರ್ಕಾರದ ಎಲ್ಲ ಮಂತ್ರಿಗಳು ರಾಜೀನಾಮೆ ನೀಡಿದ್ದರು.

21 ಮಂದಿ ಸಚಿವರ ರಾಜೀನಾಮೆ ಬೆನ್ನಲ್ಲೇ ಕ್ಯಾಬಿನೆಟ್ ದರ್ಜೆಯ ಸಚಿವರಾದ ರಾಘು ಶರ್ಮಾ, ಹರೀಶ್ ಚೌಧರಿ ಹಾಗೂ ಗೋವಿಂದ್ ಸಿಂಗ್ ಡೋಟಾಸ್ರಾ ಸಹ ರಾಜೀನಾಮೆ ನೀಡಿದ್ದರು. ಇದು ಅಂಗೀಕೃತಗೊಂಡಿದೆ.

‘ಒಬ್ಬ ವ್ಯಕ್ತಿ ಒಂದೇ ಹುದ್ದೆ’ ಎಂಬ ಕಾಂಗ್ರೆಸ್ ನಿಯಮದ ಅಡಿಯಲ್ಲಿ ಶರ್ಮಾ, ಚೌಧರಿ ಹಾಗೂ ಡೋಟಾಸ್ರಾ ರಾಜೀನಾಮೆ ಪಡೆಯಲಾಗಿದೆ ಎನ್ನಲಾಗಿದೆ.

ಶರ್ಮಾ ಅವರನ್ನು ಇತ್ತೀಚೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಗುಜರಾತ್ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಚೌಧರಿ ಅವರನ್ನು ಪಂಜಾಬ್ ಉಸ್ತುವಾರಿಯನ್ನಾಗಿ ಹಾಗೂ ಡೋಟಾಸ್ರಾ ಅವರನ್ನು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಕೆಲವು ತಿಂಗಳ ಹಿಂದೆ ಪೈಲಟ್‌ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಅವರ ಬೆಂಬಲಿಗರಿಂದ ಸಚಿವ ಸ್ಥಾನ ಕಿತ್ತುಕೊಳ್ಳಲಾಗಿತ್ತು. ಇದಾದ ಬಳಿಕ ಪೈಲಟ್‌ ಬಣವು ದೆಹಲಿ ಸೇರಿದಂತೆ ಇತರ ಕಡೆಗೆ ತೆರಳಿ ಸರ್ಕಾರವನ್ನು ಉರುಳಿಸುವ ಬೆದರಿಕೆ ಒಡ್ಡಿತ್ತು. ಈ ಬೆಳವಣಿಗೆಗಳ ಬಳಿಕ ಸಚಿವ ಸಂಪುಟ ಪುನರ್‌ರಚನೆ ಮಾಡಲಾಗುತ್ತಿದೆ. ಸಂಪುಟ ಪುನರ್‌ರಚನೆ ಮಾಡಬೇಕು ಎಂದು ಪೈಲಟ್‌ ಕೂಡ ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.