ADVERTISEMENT

ಸೋನಿಯಾ ಬಳಿ ಕ್ಷಮೆ ಕೋರಿ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಿಂದ ಹೊರನಡೆದ ಗೆಹಲೋತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2022, 11:37 IST
Last Updated 29 ಸೆಪ್ಟೆಂಬರ್ 2022, 11:37 IST
ಸೋನಿಯಾ ಗಾಂಧಿ ಮತ್ತು ಅಶೋಕ್‌ ಗೆಹಲೋತ್‌
ಸೋನಿಯಾ ಗಾಂಧಿ ಮತ್ತು ಅಶೋಕ್‌ ಗೆಹಲೋತ್‌   

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.

ರಾಜ್ಯ (ರಾಜಸ್ಥಾನ) ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.ಇದರೊಂದಿಗೆ, ಹಲವು ಊಹಾಪೋಹಗಳಿಗೆ ತೆರೆಬಿದ್ದಿದೆ.

ಇದೀಗ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಮತ್ತು ಕೇರಳದ ತಿರುವನಂತಪುರ ಸಂಸದ ಶಶಿ ತರೂರ್‌ಅವರು ಪಕ್ಷದ ಉನ್ನತ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ

ADVERTISEMENT

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಹೇಳಿಕೆ ನೀಡಿರುವ ಗೆಹಲೋತ್, 'ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ' ಎಂದಿದ್ದಾರೆ. ಈ ವೇಳೆ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್‌ ಅವರೂ ಜೊತೆಗಿದ್ದರು.

ಸೋನಿಯಾ ಬಳಿ ಕ್ಷಮೆ ಯಾಚನೆ
ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾದ ಬಿಕ್ಕಟ್ಟಿನ ಕುರಿತು ಗೆಹಲೋತ್‌ ಅವರು ಸೋನಿಯಾ ಜೊತೆಗಿನ ಸಭೆ ವೇಳೆ ಕ್ಷಮೆಯಾಚಿಸಿದ್ದಾರೆ. ಹಾಗೆಯೇ ತಾವು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಪಕ್ಷದ ನಾಯಕತ್ವಕ್ಕೆ ಬಿಟ್ಟ ವಿಚಾರ ಎಂದೂ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನ ಸಿಎಂ ಆಗಿರುವ ಅವರು ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದರು. ಹೀಗಾಗಿ, ಸಚಿನ್‌ ಪೈಲಟ್‌ ಅವರನ್ನು ಮುಂದಿನ ಸಿಎಂ ಎಂದು ಘೋಷಿಸಲು ಹೈಕಮಾಂಡ್‌ ಒಲವು ತೋರಿದೆ ಎಂದು ವರದಿಯಾಗಿತ್ತು. ಇದರಿಂದಾಗಿ ಗೆಹಲೋತ್‌ ಬಣದ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು.

ಪಕ್ಷದ ವೀಕ್ಷಕರನ್ನಾಗಿ ರಾಜ್ಯಕ್ಕೆ ಹೈಕಮಾಂಡ್‌ ಕಳುಹಿಸಿದ್ದ ಅಜಯ್‌ ಮಾಕನ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ (ಸೆಪ್ಟೆಂಬರ್‌ 25ರಂದು) ಸಂಜೆ ಕರೆದಿದ್ದ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೂ ಹಾಜರಾಗದೆ ಪ್ರತ್ಯೇಕ ಸಭೆ ನಡೆಸಿದ್ದರು.

ಸಚಿವರಾದ ಶಾಂತಿ ಧರಿವಾಲ್‌, ಮಹೇಶ್‌ ಜೋಶಿ ಹಾಗೂ ಪ್ರತಾಪ್‌ ಸಿಂಗ್‌ ಖಚಾರಿಯಾವಾಸ್‌ ಅವರುಗೆಹಲೋತ್‌ ಬೆಂಬಲಿಗರ ಪ್ರತಿನಿಧಿಗಳಾಗಿ ಮಾಕನ್ ಹಾಗೂ ಖರ್ಗೆ ಅವರನ್ನು ಭೇಟಿ ಮಾಡಿ ಮೂರು ಷರತ್ತುಗಳನ್ನು ಹಾಕಿದ್ದರು.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಂತರವೇ ರಾಜಸ್ಥಾನ ಸಿಎಂ ಆಯ್ಕೆಯಾಗಬೇಕು, ರಾಜ್ಯದಲ್ಲಿ 2020ರಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದ ಶಾಸಕರಲ್ಲಿಯೇ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಹಾಗೂ ಕಾಂಗ್ರೆಸ್‌ ವೀಕ್ಷಕರು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸದೆ ಸಾಮೂಹಿಕವಾಗಿ ಚರ್ಚಿಸಬೇಕು ಎಂದು ಪಟ್ಟು ಹಿಡಿದಿದ್ದರು.

ಇದರಿಂದಾಗಿ ಬಿಕ್ಕಟ್ಟು ತಲೆದೋರಿತ್ತು.ಮಾಕನ್ ಹಾಗೂ ಖರ್ಗೆ ದೆಹಲಿಗೆ ವಾಪಸ್‌ ಆಗಿ, ಸೋನಿಯಾಗೆ ಲಿಖಿತ ವರದಿ ನೀಡಿದ್ದರು.

ಇದಾದ ಬಳಿಕ ದಿಗ್ವಿಜಯ್‌ ಹೆಸರು ಮುನ್ನಲೆಗೆ ಬಂದಿದೆ.ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ನಾಮಪತ್ರದ ಅರ್ಜಿ ಪಡೆದುಕೊಂಡಿದ್ದು, ಶುಕ್ರವಾರ (ಸೆಪ್ಟೆಂಬರ್‌ 30ರಂದು) ನಾಮಪತ್ರ ಸಲ್ಲಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.