ಜೈಪುರ:ಮುಖ್ಯ ಮಂತ್ರಿ ಆಯ್ಕೆ ಮಾಡುವ ವಿಚಾರದಲ್ಲಿ ಉಂಟಾದ ಬಿಕ್ಕಟ್ಟಿನಿಂದ ಗೆಹಲೋತ್ ಬಣದ ಕಾಂಗ್ರೆಸ್ ಶಾಸಕ ಮತ್ತು ಸಚಿವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರಿಗೆ ರಾಜ್ಯ ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ.
ವಿರೋಧ ಪಕ್ಷದ ಮುಖಂಡ ಗುಲಾಬ್ ಚಾಂದ್ ಕಟಾರಿಯಾ ಸೇರಿದಂತೆ ನಿಯೋಗವೊಂದು ಮಂಗಳವಾರ ಸಭಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರಾಜೀನಾಮೆ ಅಂಗೀಕಾರವಾಗದಿದ್ದರೆ ಕಾಂಗ್ರೆಸ್ ಶಾಸಕರು ಅದನ್ನು ವಾಪಾಸ್ ಪಡೆದು ಜನರಲ್ಲಿ ಕ್ಷಮೆ ಯಾಚಿಸಬೇಕೆಂದು ಕಟಾರಿಯಾ ಒತ್ತಾಯಿಸಿದ್ದಾರೆ.
ಸಚಿವರು ಸೇರಿದಂತೆ 91 ಶಾಸಕರು ಸೆ.25ರಂದು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆಡಳಿತ ಪಕ್ಷದ ಸಭೆಯನ್ನು ಬಹಿಷ್ಕರಿಸಿ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಶಾಂತಿ ಧಾರಿವಾಲ್ ಮನೆಯಲ್ಲಿ ಸಭೆ ನಡೆಸಿದ್ದಾರೆ ಎಂದು ಕಟಾರಿಯಾ ಹೇಳಿದ್ದಾರೆ.
ರಾಜೀನಾಮೆ ನೀಡಿ 3 ವಾರಗಳು ಕಳೆದಿದ್ದರೂ ರಾಜೀನಾಮೆ ಸ್ಪೀಕರ್ ಪರಿಶೀಲನೆಯಲ್ಲಿದೆ. ಶಾಸಕರು ಸ್ವ ಇಚ್ಛೆಯಿಂದ ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉದ್ಭವಗೊಂಡಿದ್ದು, ಹೈಕಮಾಂಡ್ ಯಾವುದೇ ಕ್ರಮ ತೆಗೆದುಕೊಳ್ಳದೇ ಅಶೋಕ್ ಗೆಹಲೋತ್ ಅವರನ್ನು ಮುಂದುವರಿಸಿದೆ. ಸಚಿನ್ ಪೈಲೆಟ್ ಮುಖ್ಯಮಂತ್ರಿಯಾಗುವುದನ್ನು ವಿರೋಧಿಸಿ ಗೆಹಲೋತ್ ಬಣದ ಶಾಸಕ ಮತ್ತು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.