ಜೈಪುರ: ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ತಾರಕಕ್ಕೇರಿದೆ. ಭಾನುವಾರ ಸಂಜೆ ನಿಗದಿಯಾಗಿದ್ದ ಶಾಸಕಾಂಗ ಪಕ್ಷದ ಸಭೆಗೂ (ಸಿಎಲ್‌ಪಿ) ಮುನ್ನ, ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರ ಗುಂಪು
ಸಾಮೂಹಿಕ ರಾಜೀನಾಮೆ ಬೆದರಿಕೆ ಹಾಕಿದೆ. ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲು
ಸುಮಾರು 80 ಶಾಸಕರು ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಗೆಹಲೋತ್ ಆಯ್ಕೆಯಾದಲ್ಲಿ, ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ನೇಮಕವಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಗೆಹಲೋತ್ ಬಣದ ಶಾಸಕರು ಈ ನಡೆ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ, ಸರ್ಕಾರದ ಮೇಲೆ ಹಿಡಿತ ಸಾಧಿಸಲು ಗೆಹಲೋತ್–ಪೈಲಟ್ ಬಣಗಳು ಮತ್ತೆ ಸಂಘರ್ಷಕ್ಕೆ ಇಳಿದಿರುವುದು ಸ್ಪಷ್ಟವಾಗಿದೆ.
ಸಿಎಲ್‌ಪಿ ಸಭೆಗೆ ಕೇಂದ್ರದ ವೀಕ್ಷಕರಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಬಂದಿದ್ದಾರೆ. ಆದರೆ, ಸಭೆಗೂ ಮುನ್ನ ಸಚಿವ ಶಾಂತಿ ಧರಿವಾಲಾ ಅವರ ನೇತೃತ್ವದಲ್ಲಿ ಗೆಹಲೋತ್ ಆಪ್ತ ಬಣದ ಶಾಸಕರ ಸಭೆ ನಡೆಯಿತು.ಗೆಹಲೋತ್ ಆಪ್ತರಲ್ಲಿ ಒಬ್ಬರನ್ನು ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುವಂತೆ ಪಕ್ಷದ ಮೇಲೆ ಒತ್ತಡ ಹೇರುವುದು ಈ ಸಭೆಯ ಉದ್ದೇಶವಾಗಿತ್ತು. ಪಕ್ಷೇತರರೂ ಸೇರಿ 80 ಶಾಸಕರು ಸಭೆಯಲ್ಲಿದ್ದರು ಎಂದು ಹೇಳಲಾಗಿದೆ. ಸ್ಪೀಕರ್ ಸಿ.ಪಿ. ಜೋಷಿ ಅವರನ್ನು ಭೇಟಿಯಾಗಲು ಸಭೆಯಲ್ಲಿದ್ದ ಶಾಸಕರು ನಿರ್ಧರಿಸಿದರು.
‘ನಾವು ಬಸ್ ಮೂಲಕ ಸ್ಪೀಕರ್ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಲಿದ್ದೇವೆ’ ಎಂದು ಸಚಿವ ಪ್ರತಾಪ್ ಸಿಂಗ್ ಖಾಚರಿಯಾವಾಸ್ ಅವರು ಹೇಳಿದರು.
2020ರಲ್ಲಿ ಎದುರಾದ ಬಿಕ್ಕಟ್ಟಿನಿಂದ ಸರ್ಕಾರವನ್ನು ಪಾರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕರೊಬ್ಬರು ಮುಖ್ಯಮಂತ್ರಿಯಾಗಬೇಕೇ ಹೊರತು, ಸರ್ಕಾರವನ್ನು ಕೆಡವಲು ಮುಂದಾಗಿದ್ದವರಿಗೆ ಹುದ್ದೆ ನೀಡಬಾರದು ಎಂಬುದು ಕೆಲವು ಶಾಸಕರ ಆಗ್ರಹ. 18 ಶಾಸಕರ ಜೊತೆ ಬಂಡಾಯ ಎದ್ದಿದ್ದಪೈಲಟ್ ಅವರನ್ನು ಗುರಿಯಾಗಿಸಿ ಶಾಸಕರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೆಹಲೋತ್ ಅವರು ಎರಡೂ ಹುದ್ದೆಗಳನ್ನು ನಿಭಾಯಿಸಲು ಸಮರ್ಥರು ಎಂದು ಪಕ್ಷದ ಮುಖಂಡ ಗೋವಿಂದ ರಾಮ್ ಮೇಘವಾಲ್ ಹೇಳಿದ್ದಾರೆ. ಶಾಸಕರ ಆಶೋತ್ತರಗಳಿಗೆ ಅನುಗುಣವಾಗಿ ಸಿಎಲ್‌ಪಿ ನಾಯಕನನ್ನು ಆಯ್ಕೆ ಮಾಡದಿದ್ದಲ್ಲಿ, ಸರ್ಕಾರ ಮತ್ತೆ ಅಪಾಯಕ್ಕೆ ಸಿಲುಕಲಿದೆ ಎಂದು ಮುಖ್ಯಮಂತ್ರಿ ಸಲಹೆಗಾರ ಶ್ಯಾಮ್ ಲೋಧಾ ಅವರು ಅಭಿಪ್ರಾಯಪಟ್ಟಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಖ್ಯಮಂತ್ರಿ ಹುದ್ದೆಗೆ ಗೆಹಲೋತ್, ಪೈಲಟ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಗೆಹಲೋತ್ ಅವರನ್ನು ಪಕ್ಷ ಆಯ್ಕೆ ಮಾಡಿತ್ತು.
ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲ ಶಾಸಕರ ಸಂಪೂರ್ಣ ಬೆಂಬಲವಿದೆ ಎಂಬ ಒಂದು ಸಾಲಿನ ನಿರ್ಣಯವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಗೆಹಲೋತ್ ಅವರು ಸಭೆಗೂ ಮುನ್ನ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.