‘ಚುನಾವಣೆ ದೊಡ್ಡವರ (ಬಡೇ ಲೋಗ್) ವಿಷಯ. ಆ ಬಗ್ಗೆ ನಾವು ಮಾತನಾಡುವುದೇ ಇಲ್ಲ. ಮತಹಾಕುವುದಷ್ಟೇ ನಮ್ಮ ಕೆಲಸ. ಮತದಾನದ ದಿನ ಊರಿಗೆ ಹೋಗಿ ಮತ ಹಾಕುತ್ತೇನೆ. ಅಲ್ಲಿಗೆ ಮುಗಿಯಿತು’ ಎನ್ನುತ್ತಾರೆ ಕೂಲಿ ಕಾರ್ಮಿಕ ನಾರಾಯಣ್. ಮತ್ತೂ ಮಾತಿಗೆಳೆದಾಗ, ‘ನೋಡಿ ಕೆಲಸ ಮಾಡಿದವರಿಗೆ ಮತ ಹಾಕುತ್ತೇವೆ’ ಎಂದು ಸಣ್ಣದನಿಯಲ್ಲಿ ಹೇಳುತ್ತಾ ಮಾತು ಮುಗಿಸಿದರು.
ಉದಯಪುರದ ನಟ್ಟನಡುವೆ ಇರುವ ಹಥೀಪೋಲೆ ವೃತ್ತದಲ್ಲಿ ನಾರಾಯಣ್ ಅವರಂತಹ ನೂರಾರು ಕೂಲಿಕಾರ್ಮಿಕರು ನಿಂತಿರುತ್ತಾರೆ. ಹೀಗೆ ನಿಂತಿದ್ದವರನ್ನು ಮಾತಿಗೆ ಎಳೆದಾಗ ಬಹುತೇಕ ಮಂದಿ ಹೇಳಿದ್ದು, ‘ಚುನಾವಣೆ ದೊಡ್ಡವರ ವಿಷಯ’. ಈ ದೊಡ್ಡವರು ಎಂದರೆ ಪ್ರಬಲ ಜಾತಿ ಸಮುದಾಯದ ಜನರು ಎಂದೇ ಅರ್ಥ. ರಜಪೂತರು, ರಾಜಪುರೋಹಿತರು, ಜಾಟರು, ಗುಜ್ಜಾರರು, ಯಾದವರು, ಮುಸ್ಲಿಮರು... ಈ ದೊಡ್ಡವರ ಪಟ್ಟಿಯಲ್ಲಿ ಬರುವ ಸಮುದಾಯಗಳು.
ರಾಜಸ್ಥಾನದ 200 ಕ್ಷೇತ್ರಗಳ ಪೈಕಿ 142ರಲ್ಲಿ ಈ ‘ದೊಡ್ಡವರೇ’ ಅಭ್ಯರ್ಥಿಗಳು. ಆದರೆ ಈ ಎಲ್ಲಾ ಕ್ಷೇತ್ರಗಳಲ್ಲೂ ಪರಿಶಿಷ್ಟ ಜಾತಿ ಸಮುದಾಯದ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಉದಯಪುರದ ಬೇಕಡಿಯಾ ಪರಿಶಿಷ್ಟರದ್ದೇ ಪ್ರಾಬಲ್ಯವಿರುವ ಒಂದು ಊರು. ‘ನಮ್ಮೂರಿನಲ್ಲಿ 4,000 ಜನ ಇದ್ದೇವೆ. ಅದರಲ್ಲಿ ಅರ್ಧದಷ್ಟು ಜನ ಸಣ್ಣ ಜಾತಿಯವರು (ಛೋಟಾ ಜಾತ್: ಪರಿಶಿಷ್ಟ ಜಾತಿಯ ಜನರನ್ನು ಸಣ್ಣಜಾತಿಯವರು ಎಂದೇ ಕರೆಯಲಾಗತ್ತದೆ). ಈಗಿನ ಶಾಸಕ ವರ್ಷಕ್ಕೊಂದು ಬಾರಿ ಊರಿಗೆ ಬರುತ್ತಾರೆ. ಸಣ್ಣ ಜಾತಿಯವರನ್ನು ಮಾತನಾಡಿಸುವುದೂ ಇಲ್ಲ, ಮತ ಹಾಕಿ ಎಂದು ಕೇಳುವುದೂ ಇಲ್ಲ. ಈ ಬಾರಿ ಅವರಿಗೆ ಮತ ಹಾಕುವುದಿಲ್ಲ’ ಎಂದು ನಿರ್ಣಾಯಕ ದನಿಯಲ್ಲಿ ಹೇಳಿದರು ಬೇಕಡಿಯಾದ ಗೋಪಾಲ್. ಅವರ ಪಕ್ಕದಲ್ಲೇ ಇದ್ದ ಗೋವಿಂದ, ‘ನಾವು ಕಾದು ನಿಂತಿದ್ದರೂ ಶಾಸಕ ಕಾರಿನಿಂದ ಇಳಿಯುವುದೇ ಇಲ್ಲ, ನಮ್ಮತ್ತ ನೋಡುವುದೂ ಇಲ್ಲ. ನಾವು ಮತಹಾಕಿ ಶಾಸಕರ ಬದಲಿಸುತ್ತೇವೆ’ ಎಂದು ಮಾತು ಸೇರಿಸಿದರು.
ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯ ನಡೆದ ಅತಿಹೆಚ್ಚು ಪ್ರಕರಣಗಳು ವರದಿಯಾಗುವುದು ರಾಜಸ್ಥಾನದಲ್ಲಿ. ಬಿಜೆಪಿ ಸಹ, ‘ಕಾಂಗ್ರೆಸ್ ಆಡಳಿತದಲ್ಲಿ ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ’ ಎಂದು ಆರೋಪಿಸಿದೆ.
ಮೆವಾಡ ಪ್ರಾಂತದ ಮಧ್ಯಭಾಗದಲ್ಲಿರುವ ಪಾಲಿ ಜಿಲ್ಲೆಯಲ್ಲಿ ರಾಜಪುರೋಹಿತ ಸಮುದಾಯದ್ದೇ ಪ್ರಾಬಲ್ಯ. ಇಲ್ಲಿನ ಹಳ್ಳಿಗಳಲ್ಲಿ ‘ರಾಜಪುರೋಹಿತಸ್ಥಾನ್’ ಎಂದು ಫಲಕ ಹಾಕಿರಲಾಗುತ್ತದೆ. ಆ ಫಲಕಗಳಲ್ಲಿ ಸರಪಂಚ, ಶಾಸಕರ ಹೆಸರನ್ನೂ ಹಾಕಿರಲಾಗುತ್ತದೆ. ಈಗ ನೀತಿ ಸಂಹಿತೆಯ ಭಾಗವಾಗಿ ಆ ಫಲಕಗಳನ್ನು ಮುಚ್ಚಲಾಗಿದೆ.
‘ಸಣ್ಣಜಾತಿಯವರು ಬೈಕ್ ಓಡಿಸಿಕೊಂಡು ಊರಿನೊಳಗೆ ಪ್ರವೇಶಿಸುವಂತಿಲ್ಲ ಎಂದೂ ಆ ಬೋರ್ಡ್‌ನಲ್ಲಿ ಬರೆದಿದೆ. ಇದೆಲ್ಲಾ ನಮ್ಮ ಮೇಲೆ ನಡೆಯುವ ದೌರ್ಜನ್ಯ ಎಂದು ನಮಗೆ ಗೊತ್ತೇ ಇರಲಿಲ್ಲ. ಇಂತಹ ಫಲಕಗಳ ವಿರುದ್ಧ ದೂರು ನೀಡಿದ ನಂತರ, ನೂರಾರು ಫಲಕಗಳನ್ನು ಜಿಲ್ಲಾಧಿಕಾರಿ ತೆಗೆಸಿದ್ದಾರೆ. ದೌರ್ಜನ್ಯದ ಬಗ್ಗೆ ಅರಿವು ಮೂಡಿರುವುದರಿಂದ ಜನರೂ ದೂರು ನೀಡುತ್ತಿದ್ದಾರೆ. ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದು ನಮ್ಮ ಜನರಿಗೆ ಗೊತ್ತೇ ಇಲ್ಲದ ಕಾರಣದಿಂದ ಚುನಾವಣೆಯಲ್ಲಿ ಇದು ವಿಷಯವೇ ಅಲ್ಲ. ನಮ್ಮ ಜನ ತಮಗೆ ಅನುಕೂಲ ಮಾಡಿಕೊಟ್ಟವರಿಗಷ್ಟೇ ಮತ ಹಾಕುತ್ತಾರೆ. ಹೀಗಾಗಿ ಇಲ್ಲಿನ ಶಾಸಕರು ಬದಲಾಗುತ್ತಲೇ ಇರುತ್ತಾರೆ. ಆದರೆ ಆ ಬಗ್ಗೆ ಮಾತನಾಡುವುದೇ ಇಲ್ಲ’ ಎನ್ನುತ್ತಾರೆ ಸುಮೇರ್‌ಪುರದ ಕಟ್ಟಾರಾಮ್.
ಈ ಜನರು ಚುನಾವಣೆಯ ಬಗ್ಗೆ, ಚುನಾವಣೆಯಲ್ಲಿ ತಮ್ಮ ಆಯ್ಕೆಯ ಬಗ್ಗೆ ದೊಡ್ಡದಾಗಿ ಮಾತನಾಡುವುದೇ ಇಲ್ಲ. ಆ ಬಗ್ಗೆ ಹೇಳಲೇಬೇಕೆಂದರೆ ಕಿವಿಯ ಬಳಿ ಬಂದು ಪಿಸುದನಿಯಲ್ಲಿ ಹೇಳುತ್ತಾರೆ, ಅದೂ ಹೊಸ ತಲೆಮಾರಿನ ಯುವಕರು ಮಾತ್ರ. ಮೌಂಟ್ ಅಬು ತಪ್ಪಲಿನ ಪಂಡ್ವಾಡಾದಲ್ಲಿ ಇಂಥದ್ದೇ ಸ್ಥಿತಿ ಇದೆ.
ಪಂಡ್ವಾಡಾದ ಹೊರವಲಯದ ಹೆದ್ದಾರಿಯಲ್ಲಿ ಗ್ಯಾರೇಜ್ ನಡೆಸುವ ರೂಪೇಶ್ ಕುಮಾರ್, ‘ನಮಗಂತೂ ಈ ಸರ್ಕಾರದಿಂದ ಅನುಕೂಲವಾಗಿದೆ. ನಾನಂತೂ ಕಾಂಗ್ರೆಸ್‌ಗೆ ಮತಹಾಕುತ್ತೇನೆ’ ಎಂದು ಪಿಸುದನಿಯಲ್ಲಿ ಹೇಳಿದರು. ಪರಿಶಿಷ್ಟ ಜಾತಿಗಳಲ್ಲೇ ಅಂಚಿನವರಾದ ಬೋಲಾ ಸಮುದಾಯದ ರೂಪೇಶ್, ತಮ್ಮೂರಿನಲ್ಲಿರುವ ಏಕೈಕ ಬೈಕ್ ಮೆಕ್ಯಾನಿಕ್. ಪ್ರಬಲ ಜಾತಿಗಳ ಜನರು ಆತನ ಗ್ಯಾರೇಜ್‌ಗೆ ಬಂದರೂ ಹತ್ತುಮಾರು ದೂರದಲ್ಲೇ ಗಾಡಿ ನಿಲ್ಲಿಸುತ್ತಾರೆ. ರೂಪೇಶ್ ಹೋಗಿ ಗಾಡಿ ತಳ್ಳಿಕೊಂಡು ಬಂದು ರಿಪೇರಿ ಮಾಡಿಕೊಡಬೇಕು. ಇದನ್ನು ಆತ, ಸಹಜ ಎಂಬಂತೇ ಮಾಡುತ್ತಿದ್ದ. ಚುನಾವಣೆಯ ವಿಷಯವನ್ನು ಕೆದಕಿದಾಗ ಅನ್ಯರಿಗೆ ಕೇಳಿಸಿಬಿಡುತ್ತದೇನೋ ಎಂಬಂತೆ ಮೆಲುದನಿಯಲ್ಲಿ ಮಾತನಾಡುತ್ತಿದ್ದ.
‘ಈ ಜನರ ಮೇಲಿನ ದೌರ್ಜನ್ಯದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಸ್ಥಳೀಯ ನಾಯಕರು ಯಾರೂ ಮಾತನಾಡುವುದಿಲ್ಲ. ಏಕೆಂದರೆ ಅದನ್ನು ದೌರ್ಜನ್ಯ ಎಂದು ಯಾರು ಪರಿಗಣಿಸುತ್ತಲೇ ಇಲ್ಲ. ಅಂತಹ ಯಾಜಮಾನ್ಯ ಸ್ಥಿತಿ ಇಲ್ಲಿದೆ. ಅದನ್ನು ಎಲ್ಲರೂ ಒಪ್ಪಿಕೊಂಡು ಹೋಗುತ್ತಿದ್ದಾರೆ. ಪರಿಶಿಷ್ಟ ಜಾತಿಗಳಿಗೆ ಮೀಸಲಾದ 34 ಕ್ಷೇತ್ರಗಳಲ್ಲಿ ಶಾಸಕರು ಬದಲಾಗುವುದೇ ಇಲ್ಲ. ಆದರೆ, ಪರಿಶಿಷ್ಟ ಜನರು ನಿರ್ಣಾಯಕರಾಗಿರುವ 70ಕ್ಕೂ ಹೆಚ್ಚು ಕ್ಷೇತ್ರಗಳಿವೆ. ಅಲ್ಲಿ ಶಾಸಕರು ಬದಲಾಗುತ್ತಲೇ ಇರುತ್ತಾರೆ. ಈ ಜನಕ್ಕೆ ರಾಜಕೀಯ ಪ್ರಜ್ಞೆ ಚೆನ್ನಾಗಿದೆ. ಶಾಸಕ ತಮಗೆ ಸ್ಪಂದಿಸುತ್ತಿಲ್ಲ ಎಂದಾದರೆ, ಚುನಾವಣೆವರೆಗೂ ಕಾಯುತ್ತಾರೆ ಮತ್ತು ಎದುರಾಳಿಗಳಿಗೆ ಮತಹಾಕುತ್ತಾರೆ’ ಎನ್ನುತ್ತಾರೆ ಜೋಧಪುರದ ಜೈನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಓಂಪ್ರಕಾಶ್ ಅಗರ್ವಾಲ್.
‘ದೊಡ್ಡವರಿಗೆ ಅಡ್ಡವೂ ಹೋಗುವಂತಿಲ್ಲ’
ಮಧ್ಯಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಜಾಲಾಡ್ ಪಟ್ಟಣದ ಸಣ್ಣೂರು ಬವಾಡ್‌ಮಂಡಿ. ಬವಾಡ್‌ಮಂಡಿಯ ಪ್ರವೇಶದ್ವಾರದಲ್ಲಿ ಸಿಕ್ಕ ಹೇಮಲತಾ ಪಾಂಚಾಲ್ ಸರ್ಕಾರದಿಂದ ತಮಗೆ ಸಿಕ್ಕಿರುವ ಲಾಭಗಳ ಬಗ್ಗೆ ಮಾತನಾಡುತ್ತಿದ್ದರು. ಅಗ ಜೀಪೊಂದು ದೂಳೆಬ್ಬಿಸುತ್ತಾ ಹೋಯಿತು. ಹೇಮಲತಾ. ‘ಅವರು ನಮ್ಮ ಸರಪಂಚ, ದೊಡ್ಡವರು. ಅವರ ಗಾಡಿಗೆ ಅಡ್ಡ ಹೋಗುವಂತೆಯೇ ಇಲ್ಲ. ಹೋದರೆ ಅವರ ಕತೆ ಮುಗಿದಂತೆಯೇ. ಏನು ಬೇಕಿದ್ದರೂ ನಾವು ಅವರ ಮನೆಯ ಮುಂದೆ ನಿಲ್ಲಬೇಕು’ ಎಂದರು.
ಜಾಲಾವಾಡ್ ಜಿಲ್ಲೆಯಿಂದ ಜಾಲಾಡ್ ಪಟ್ಟಣದ ಮೂಲಕ ಬವಾಡ್‌ಮಂಡಿವರೆಗಿನ ಪ್ರಯಾಣದಲ್ಲಿ ಇಂತಹ ಹತ್ತಾರು ಜೀಪುಗಳು ಎದುರಾದವು. ಇಡೀ ರಸ್ತೆಯೇ ತಮ್ಮದು ಎಂಬಂತೆ ಚಲಾಯಿಸುತ್ತಿದ್ದ ಈ ಜೀಪುಗಳಿಗೆ ನೋಂದಣಿ ಸಂಖ್ಯೆಯ ಫಲಕಗಳೇ ಇರಲಿಲ್ಲ. ಬದಲಿಗೆ ‘ಸರಪಂಚ’ ಎಂಬ ಫಲಕ ಇದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.