ADVERTISEMENT

ರಾಜಸ್ಥಾನ ಚುನಾವಣೆ: ಶೇಖಾವತ್ ಭೇಟಿ; ವಸುಂಧರಾ ರಾಜೇ ಮುನಿಸು ಶಮನಕ್ಕೆ BJP ಯತ್ನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2023, 6:56 IST
Last Updated 25 ಸೆಪ್ಟೆಂಬರ್ 2023, 6:56 IST
ವಸುಂಧರಾ ರಾಜೇ
ವಸುಂಧರಾ ರಾಜೇ   

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಮುನಿಸಿಕೊಂಡಿರುವ ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೇ ಮನೆಗೆ ಪಕ್ಷದ ರಾಜ್ಯಾಧ್ಯಕ್ಷ ಗಜೇಂದ್ರ ಸಿಂಗ್ ಶೇಖಾವತ್‌ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಕೆಲ ದಿನಗಳ ಹಿಂದೆ ವಸುಂಧರಾ ರಾಜೇ ಅವರನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಭೇಟಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದಾದ ಬೆನ್ನಲ್ಲೇ ರಾಜೇ ಅವರು ಬಿಜೆಪಿ ತೊರೆದು, ಕಾಂಗ್ರೆಸ್ ಸೇರಲಿದ್ದಾರೆಯೇ ಎಂಬ ಚರ್ಚೆಗಳೂ ನಡೆದಿದ್ದವು.

ಆದರೆ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡದ ಶೇಖಾವತ್ ಅವರು ರಾಜೇ ಅವರ ಈ ಭೇಟಿ ಕುರಿತು ಪಕ್ಷದ ಕಾರ್ಯಕರ್ತರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಪರಿವರ್ತನ ಮಹಾ ಸಮ್ಮೇಳನ ಸೋಮವಾರ (ಇಂದು) ಆರಂಭವಾಗಲಿದೆ. ಇದಕ್ಕೆ ಪ್ರಧಾನಿ ಮೋದಿ ಅವರು ಜೈಪುರದಲ್ಲಿ ಚಾಲನೆ ನೀಡಲಿದ್ದಾರೆ. ಒಟ್ಟು ನಾಲ್ಕು ಹಂತಗಳಲ್ಲಿ ನಡೆಯುವ ಪರಿವರ್ತನ ಯಾತ್ರೆಯು ರಾಜ್ಯದ 200 ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಆದರೆ ಕಳೆದ ಎರಡು ದಿನಗಳಿಂದ ಪಕ್ಷದ ವೇದಿಕೆಗಳಲ್ಲಿ ವಸುಂಧರಾ ರಾಜೇ ಕಾಣಿಸಿಕೊಂಡಿರಲಿಲ್ಲ. ಆದರೆ ಶೇಖಾವತ್ ಅವರ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ರಾಜೇ ಅವರೂ ಪಕ್ಷದೊಂದಿಗೆ ಇದ್ದಾರೆ ಹಾಗೂ ಇದು ಜಂಟಿ ಹೋರಾಟ ಎಂಬ ಸಂದೇಶವನ್ನು ಜನರಿಗೆ ರವಾನಿಸುವ ಪ್ರಯತ್ನ ನಡೆಸಿದ್ದಾರೆ ಎಂದೆನ್ನಲಾಗುತ್ತಿದೆ.

2018ರಲ್ಲಿ ಶೇಖಾವತ್ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸಿದ್ದಕ್ಕೆ ವಸುಂಧರಾ ರಾಜೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಮೂಲಕ ಜಾಟ್ ಸಮುದಾಯವನ್ನು 2018ರ ಚುನಾವಣೆಯಿಂದ ಜಾಟ್ ಸಮುದಾಯವನ್ನು ದೂರವಿಡಲಾಗಿದೆ ಎಂದೂ ಆರೋಪಿಸಲಾಗಿತ್ತು. ಅಲ್ಲಿಂದ ಈ ಇಬ್ಬರು ಮುಖಂಡರು ಪರಸ್ಪರ ಭೇಟಿಯಾಗಿರಲಿಲ್ಲ.

ಆದರೆ ವಸುಂಧರಾ ಅವರ ಮನೆಗೆ ಭಾನುವಾರ ಶೇಖಾವತ್ ಭೇಟಿ ನೀಡಿದರು. ನಂತರ ಈ ಇಬ್ಬರು ಮುಖಂಡರು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಒಟ್ಟಿಗೆ ಪಾಲ್ಗೊಂಡರು. 

ಜೈಪುರದಿಂದ ದಕ್ಷಿಣಕ್ಕೆ 16 ಕಿ.ಮೀ. ದೂರದಲ್ಲಿರುವ ದಾಡಿಯಾದಲ್ಲಿ ಸೋಮವಾರದಿಂದ ಆರಂಭವಾಗಲಿರುವ ಪರಿವರ್ತನ ಸಂಕಲ್ಪ ಮಹಾಸಭಾದಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಷಯವನ್ನು ಪ್ರಧಾನಿ ಪ್ರಸ್ತಾಪಿಸಲಿದ್ದಾರೆ ಎಂದೆನ್ನಲಾಗಿದೆ. ಈ ಸಮಾವೇಶವನ್ನು ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸುತ್ತಿದೆ. ಒಟ್ಟು 42 ಘಟಕಗಳು ಇದರಲ್ಲಿ ಪಾಲ್ಗೊಂಡಿವೆ. ಮೋದಿ ಅವರು ತೆರೆದ ವಾಹನದಲ್ಲಿ ಸಮಾವೇಶದ ವೇದಿಕೆಗೆ ಬರಲಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಪುಷ್ಪವೃಷ್ಟಿಗೆ ಯೋಜನೆ ರೂಪಿಸಲಾಗಿದೆ. ರಾಜಸ್ಥಾನದ ಈ ಭೇಟಿ ಸಂದರ್ಭದಲ್ಲಿ ಜೈಪುರದಿಂದ 40 ಕಿ.ಮೀ. ದೂರದಲ್ಲಿರುವ ದೀನ್‌ದಯಾಳ್ ಉಪಾಧ್ಯಾಯ ಅವರ ಹುಟ್ಟೂರಾದ ಧಾಂಕಿಯಾ ಗ್ರಾಮದಲ್ಲಿ ನಿರ್ಮಿಸಲಾಗಿರುವ ಅವರ ಸ್ಮಾರಕಕ್ಕೆ ಗೌರವ ಸಮರ್ಪಣೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.