ಜೈಪುರ: ‘ದೆಹಲಿ ಚಲೋ’ ಪ್ರತಿಭಟನೆಗೆ ರಾಜಸ್ಥಾನದ ರೈತರು ಬೆಂಬಲ ನೀಡಿದ್ದಾರೆ. ಜೊತೆಗೆ ಫೆ.21ರಂದು ರಾಷ್ಟ್ರ ರಾಜಧಾನಿವರೆಗೆ ‘ಟ್ರ್ಯಾಕ್ಟರ್ ರ‍್ಯಾಲಿ’ ನಡೆಸಲು ಯೋಜನೆ ರೂಪಿಸಿದ್ದಾರೆ.
ಫೆ.21ರಂದು ರೈತರೆಲ್ಲಾ ಜೈಪುರದಲ್ಲಿ ಒಂದುಗೂಡಿ ದೆಹಲಿವರೆಗೆ ರ‍್ಯಾಲಿ ನಡೆಸಲಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಜಾರಿ ಮಾಡಬೇಕೆಂದು ಆಗ್ರಹಿಸುವ ಪ್ರತಿಭಟನೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳೂ ಭಾಗಿಯಾಗಬೇಕು ಎಂದು ರೈತರು ಮನವಿ ಮಾಡಿದ್ದಾರೆ.
‘ದೆಹಲಿ ಚಲೋ’ದಲ್ಲಿ ಭಾಗಿಯಾಗಲು ಹನುಮಗಢ ಮತ್ತು ಶ್ರೀಗಂಗಾನಗರ ಜಿಲ್ಲೆಯ ರೈತರು ದೆಹಲಿಗೆ ಆಗಮಿಸುತ್ತಿದ್ದಾರೆ’ ಎಂದು ಕಿಸಾನ್ ಮಹಾಪಂಚಾಯತ್ ರಾಷ್ಟ್ರೀಯ ಅಧ್ಯಕ್ಷ ರಾಂಪಾಲ್ ಜಾಟ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರೈತರು ಅತ್ಯಂತ ಅಪಾಯಕಾರಿ ಶತ್ರುಗಳು ಎಂಬಂತೆ ಕೇಂದ್ರ ಸರ್ಕಾರವು ರೈತರ ವಿರುದ್ಧ ಯುದ್ಧ ಸಾರಿದೆ. ನಾವು ಬೆಳೆದ ಬೆಳೆಗೆ ಎಂಎಸ್‌ಪಿ ಕೇಳುತ್ತಿದ್ದೇವೆ. ಈ ಕುರಿತಂತೆ ರಚನೆಯಾದ ಸಮಿತಿಯು ಸರಿಯಾಗಿ ಕೆಲಸ ಮಾಡಿಲ್ಲ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ಇಷ್ಟೊಂದು ವಿಳಂಬ ಏಕೆ? ಬೆವರು ಹರಿಸಿ ಬೆಳೆದ ಬೆಳೆಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುವ ಮೂಲಕ ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.