ADVERTISEMENT

ರಾಜಸ್ಥಾನ: ಪೈಲಟ್, 18 ಶಾಸಕರ ವಿರುದ್ಧ ಮಂಗಳವಾರದ ವರೆಗೂ ಸ್ಪೀಕರ್ ಕ್ರಮ ಇಲ್ಲ

ಏಜೆನ್ಸೀಸ್
Published 17 ಜುಲೈ 2020, 12:11 IST
Last Updated 17 ಜುಲೈ 2020, 12:11 IST
ರಾಜಸ್ಥಾನ ರಾಜಕೀಯ ಮುಖಂಡ ಸಚಿನ್‌ ಪೈಲಟ್‌ ಇತರೆ ನಾಯಕರೊಂದಿಗೆ–ಸಂಗ್ರಹ ಚಿತ್ರ
ರಾಜಸ್ಥಾನ ರಾಜಕೀಯ ಮುಖಂಡ ಸಚಿನ್‌ ಪೈಲಟ್‌ ಇತರೆ ನಾಯಕರೊಂದಿಗೆ–ಸಂಗ್ರಹ ಚಿತ್ರ   

ಜೈಪುರ: ಶಾಸಕತ್ವವನ್ನು ಅನರ್ಹಗೊಳಿಸಲು ನೀಡಲಾಗಿರುವ ನೋಟಿಸ್ ಸಂಬಂಧ ಕಾಂಗ್ರೆಸ್‌ನ ಸಚಿನ್ ಪೈಲಟ್ ಮತ್ತು 18 ಶಾಸಕರು ರಾಜಸ್ಥಾನ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಶಾಸಕತ್ವವನ್ನು ಅನರ್ಹಗೊಳಿಸುವ ಸಂಬಂಧ ರಾಜಸ್ಥಾನ ವಿಧಾನಸಭಾ ಸ್ಪೀಕರ್‌ ನೋಟಿಸ್‌ ಜಾರಿ ಮಾಡಿದ್ದರು. ಇದರ ವಿರುದ್ಧ ಸಚಿನ್‌ ಪೈಲಟ್‌ ನೇತೃತ್ವದಲ್ಲಿ ರಾಜಸ್ಥಾನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠವು ಸೋಮವಾರಕ್ಕೆ ವಿಚಾರ ಮುಂದೂಡಿದೆ.

ಸಚಿನ್ ಪೈಲಟ್ ಸೇರಿದಂತೆ ಶಾಸಕರ ವಿರುದ್ಧ ಕ್ರಮಕೈಗೊಳ್ಳುವುದನ್ನು ತಡೆ ಹಿಡಿಯುವಂತೆ ಸ್ಪೀಕರ್‌ ಸಿ.ಪಿ.ಜೋಶಿ ಅವರಿಗೆ ರಾಜಸ್ಥಾನ ಹೈಕೋರ್ಟ್‌ ಸೂಚನೆ ನೀಡಿದೆ.

ADVERTISEMENT

'ಅನರ್ಹತೆಯನ್ನು ಎದುರಿಸುವ ಬಗ್ಗೆ ಸ್ಪೀಕರ್‌ ವಿಚಾರಣೆ ನಡೆಸಿ ತೀರ್ಪು ನೀಡುವುದನ್ನು ಗುರುವಾರ 5:30ರ ವರೆಗೂ ಮುಂದೂಡಲಾಗಿದೆ. ಆ ವರೆಗೂ ಶಾಸಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವಂತಿಲ್ಲ' ಎಂದು ಕೋರ್ಟ್ ಸೂಚಿಸಿರುವುದಾಗಿ ಸ್ಪೀಕರ್‌ ಸಿ.ಪಿ.ಜೋಶಿ ಪರ ವಕೀಲ ಪ್ರತೀಕ್‌ ಕಾಸ್ಲಿವಾಲ್‌ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

‘ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದೀರೆಂದು ಕಾಂಗ್ರೆಸ್ ದೂರು ನೀಡಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಶುಕ್ರವಾರ ಮಧ್ಯಾಹ್ನ 1ರ ಒಳಗೆ ನೀಡಿ. ಇಲ್ಲವೇ ಅನರ್ಹತೆಯನ್ನು ಎದುರಿಸಬೇಕಾಗುತ್ತದೆ’ ಎಂದು ಸ್ಪೀಕರ್ ನೀಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.