ಜೈಪುರ: ದೇವಲಿ–ಉನಿಯಾರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗೆ ಬುಧವಾರ ಕಪಾಳಮೋಕ್ಷ ಮಾಡಿದ್ದಾರೆ.
ರಾಜಸ್ಥಾನದ ಏಳು ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ.
ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿ ಪಕ್ಷೇತರರಾಗಿ ಕಣಕ್ಕಿಳಿದಿರುವ ನರೇಶ್ ಮೀನಾ ಅವರು ಮಲ್ಪುರಾದ ಉಪ–ವಿಭಾಗೀಯ ಅಧಿಕಾರಿ ಅಮಿತ್ ಚೌಧರಿ ಅವರ ಕುತ್ತಿಗೆ ಪಟ್ಟಿ ಹಿಡಿದು, ಕೆನ್ನೆಗೆ ಬಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮ್ರಾವ್ತ ಗ್ರಾಮದ ಜನರು ಚುನಾವಣೆ ಬಹಿಷ್ಕರಿಸಿದ್ದಾರೆ. ಅವರನ್ನು ಮತದಾನಕ್ಕೆ ಒಪ್ಪಿಸಲು ಹೋಗಿದ್ದ ವೇಳೆ ಅಧಿಕಾರಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣಾ ಆಧಿಕಾರಿ ಹಾಗೂ ಟೊಂಕ್ ಜಿಲ್ಲಾಧಿಕಾರಿ ಸೌಮ್ಯ ಝಾ ಹೇಳಿದ್ದಾರೆ.
'ಉನಿಯಾರ ತಾಲ್ಲೂಕಿಗೆ ಹತ್ತಿರದಲ್ಲಿರುವ ಈ ಗ್ರಾಮವು ನಗರ್ ಫೋರ್ಟ್ ತಾಲ್ಲೂಕು ವ್ಯಾಪ್ತಿಗೆ ಸೇರುತ್ತದೆ. ಹಾಗಾಗಿ, ಹಳ್ಳಿಯ ಜನರು ತಮ್ಮ ಊರನ್ನು ಉನಿಯಾರಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಚುನಾವಣೆ ಬಹಿಷ್ಕರಿಸಿದ್ದಾರೆ. ಹಳ್ಳಿಯ ಜನರಿಗೆ ನರೇಶ್ ಬೆಂಬಲ ಸೂಚಿಸಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
'ಜನರ ಮನ ಒಲಿಸಿ, ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವುದಕ್ಕಾಗಿ ಚೌಧರಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಆಗ ನರೇಶ್ ಅವರು ಅಧಿಕಾರಿಗೆ ಹೊಡೆದಿದ್ದಾರೆ' ಎಂದಿದ್ದಾರೆ.
ಗ್ರಾಮಸ್ಥರ ಬೇಡಿಕೆ ಕುರಿತು ಮಾತನಾಡಿರುವ ಅವರು, 'ಕೆಲವು ದಿನಗಳಿಂದೀಚೆಗೆ ಈ ವಿಚಾರ ಪ್ರಸ್ತಾಪಿಸಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಅಂತ್ಯಗೊಂಡ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಲಾಗಿತ್ತು' ಎಂಬುದಾಗಿ ಝಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.