ನವದೆಹಲಿ: ಸಚಿವ ರಾಜೇಂದ್ರ ಗುಡಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರಿಗೆ ಛೀಮಾರಿ ಹಾಕಿರುವ ಬಿಜೆಪಿ, ಸತ್ಯ ಹೇಳಿದ್ದರಿಂದ ಗುಡಾ ಅವರನ್ನು ವಜಾಗೊಳಿಸಲಾಗಿದೆ. ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ವಿಷಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಎಷ್ಟು ವಿಚಾರಮಗ್ನವಾಗಿದೆ ಎಂಬುವುದನ್ನು ತೋರಿಸುತ್ತಿದೆ ಎಂದು ಆರೋಪಿಸಿದೆ.
ಗುಡಾ ಅವರು ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಸೈನಿಕ ಕಲ್ಯಾಣ (ಸ್ವತಂತ್ರ ಉಸ್ತುವಾರಿ), ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಸ್ಥಾನವನ್ನು ನಿರ್ವಹಿಸಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯ ಕುರಿತಂತೆ ವಿಧಾನಸಭೆಯಲ್ಲಿ ತಮ್ಮದೇ ಸರ್ಕಾರವನ್ನು ಗುಡಾ ಪ್ರಶ್ನಿಸಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.
ಸಚಿವ ಗುಡಾ ಅವರನ್ನು ವಜಾಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ‘ಸತ್ಯ’ ಹೇಳಿದ್ದಕ್ಕಾಗಿ ಗುಡಾ ಅವರನ್ನು ತಮ್ಮ ಸಂಪುಟದಿಂದ ಗೆಹಲೋತ್ ತೆಗೆದುಹಾಕಿದ್ದಾರೆ ಎಂದು ಟ್ವೀಟ್ ಮಾಡಿದ್ದು, ಮಹಿಳೆಯರ ಮೇಲಿನ ಕಿರುಕುಳದ ಬಗ್ಗೆ ಕಾಂಗ್ರೆಸ್ ಎಷ್ಟು ಗಂಭೀರವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ವಿಧೇಯಕವೊಂದರ ಮೇಲಿನ ಚರ್ಚೆಯ ವೇಳೆ ಗುಡಾ ಅವರು, ‘ರಾಜಸ್ಥಾನದಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ನಾವು ವಿಫಲರಾಗಿದ್ದೇವೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಿವೆ, ಮಣಿಪುರ ವಿಷಯದ ಬಗ್ಗೆ ಮಾತನಾಡುವ ಮೊದಲು ನಾವು ನಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದ್ದರು.
‘ಗೆಹಲೋತ್ ಅವರ ಆಡಳಿತದಲ್ಲಿ ಸತ್ಯವನ್ನು ಹೇಳುವುದನ್ನು ನಿಷೇಧಿಸಲಾಗಿದೆ’ ಎಂದು ಟ್ವೀಟ್ ಮಾಡಿರುವ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ‘ಮುಖ್ಯಮಂತ್ರಿಗಳಿಗೆ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲ, ಅವರ ಸಚಿವ ರಾಜೇಂದ್ರ ಗುಡಾ ಅವರು ವಿಧಾನಸಭೆಯಲ್ಲಿ ಸತ್ಯವನ್ನು ಹೇಳಿದಾಗ, ಗೆಹಲೋತ್ ತುಂಬಾ ಬೇಸರಗೊಂಡು ಗುಡಾ ಅವರನ್ನು ಸ್ಥಾನದಿಂದಲೇ ತೆಗೆದುಹಾಕಿದ್ದಾರೆ ಎಂದು ಟೀಕಿಸಿದ್ದಾರೆ.
ಇದರೊಂದಿಗೆ, ತಮ್ಮ ಸಂಪುಟದ ಇತರ ಸಚಿವರು ಸತ್ಯ ಮಾತನಾಡಿದರೆ, ಅವರನ್ನು ಬಿಡುವುದಿಲ್ಲ ಎಂದು ಗೆಹಲೋತ್ ಎಚ್ಚರಿಕೆ ನೀಡಿದ್ದಾರೆ. ಸ್ವಂತ ಒಡನಾಡಿಗಳನ್ನು ಬೆದರಿಸುವುದು, ಅವರ ಬಾಯಿ ಮುಚ್ಚಿಸುವುದು ದಬ್ಬಾಳಿಕೆ ಎಂದು ಶೇಖಾವತ್ ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.