ನವದೆಹಲಿ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸಂಚು ಹೂಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಗುರುವಾರ ರಾತ್ರಿ ಆಡಿಯೊ ಸಾಕ್ಷ್ಯ ಬಿಡುಗಡೆ ಮಾಡಿದೆ.
ಕೇಂದ್ರ ಸಚಿವರೊಬ್ಬರ ಪ್ರತಿನಿಧಿ ಮತ್ತು ಸಚಿನ್ ಪೈಲಟ್ ಬಣದ ಶಾಸಕರೊಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ ಆಡಿಯೊದಲ್ಲಿದೆ. ಒಟ್ಟು 3 ಆಡಿಯೊ ಕ್ಲಿಪ್‌ಗಳಿದ್ದು ಇಂಗ್ಲಿಷ್, ಹಿಂದಿ, ಮರ್‌ವಾರಿ ಭಾಷೆಗಳಲ್ಲಿ ಸಂಭಾಷಣೆ ನಡೆದಿದೆ. ಮಾತುಕತೆ ವೇಳೆ ಕಂತಿನಲ್ಲಿ ಹಣ ನೀಡುವ ಬಗ್ಗೆ ಮತ್ತು ಪೈಲಟ್ ಬಣದ ಕೆಲವು ಶಾಸಕರ ಹೆಸರುಗಳ ಪ್ರಸ್ತಾಪವಾಗಿರುವುದು ಆಡಿಯೊದಿಂದ ತಿಳಿದುಬಂದಿದೆ.
ಆಡಿಯೊದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ‘ಡೆಕ್ಕನ್ ಹೆರಾಲ್ಡ್’ಗೆ ಸಾಧ್ಯವಾಗಿಲ್ಲ. ಬಿಜೆಪಿ ಜೊತೆ ಸೇರಿ ಸಚಿನ್ ಪೈಲಟ್ ಅವರು ರಾಜಸ್ಥಾನ ಸರ್ಕಾರ ಪತನಗೊಳಿಸಲು ಸಂಚು ಹೂಡಿದ್ದ ಬಗ್ಗೆ ಸಾಕ್ಷ್ಯವಿದೆ ಎಂದು ಅಶೋಕ್ ಗೆಹ್ಲೋಟ್ ಆರೋಪ ಮಾಡಿದ ಮರುದಿನವೇ ಆಡಿಯೊ ಬಿಡುಗಡೆ ಮಾಡಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ‘ಬಿಜೆಪಿ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕಾಂಗ್ರೆಸ್‌ನ ಕೆಲವು ಶಾಸಕರಿಗೆ ಕರೆ ಮಾಡಿ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ. ಪ್ರತಿಯೊಬ್ಬ ಜಾಟ್ ಶಾಸಕರಿಗೆ ಅವರು ಕರೆ ಮಾಡಿದ್ದಾರೆ. ಇದಕ್ಕೆ ನನ್ನ ಬಳಿ ಸಾಕ್ಷ್ಯವಿದೆ’ ಎಂದು ನಾಗೌರ್‌ನ ಸಂಸದ ಹನುಮಾನ್ ಬೆನಿವಾಲ್ ಆರೋಪಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಜಸ್ಥಾನದ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ, ಅಂತಹ ಹೇಳಿಕೆಗಳನ್ನು ನೀಡದಂತೆ ಬೆನಿವಾಲ್‌ಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.