ADVERTISEMENT

ರಾಜಸ್ಥಾನ: ಏಳು ಪಕ್ಷಗಳ ಕಾಂಗ್ರೆಸ್ಸೇತರ ಮೈತ್ರಿಕೂಟ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 17:36 IST
Last Updated 18 ಸೆಪ್ಟೆಂಬರ್ 2018, 17:36 IST

ನವದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಎಡಪಕ್ಷಗಳ ನೇತೃತ್ವದಲ್ಲಿ ಏಳು ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡಿವೆ. ಈ ಮೈತ್ರಿಕೂಟ ಸೇರಲು ಬಿಎಸ್‌ಪಿಯನ್ನೂ ಆಮಂತ್ರಿಸಲಾಗಿದೆ.

ಬಿಜೆಪಿಯ ವಿರುದ್ಧ ಮೈತ್ರಿಕೂಟ ರಚನೆಯ ಪ್ರಸ್ತಾವಕ್ಕೆ ಕಾಂಗ್ರೆಸ್‌ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಪಕ್ಷಗಳು ಹೇಳಿವೆ.

ಸಿಪಿಎಂ, ಸಿಪಿಐ, ಎಸ್‌ಪಿ, ಜೆಡಿಎಸ್‌, ಸಿಪಿಐ (ಎಂಎಲ್‌), ಆರ್‌ಎಲ್‌ಡಿ ಮತ್ತು ಎಂಸಿಪಿಐ ಒಟ್ಟಾಗಿ ರಾಜಸ್ಥಾನ ಡೆಮಾಕ್ರಟಿಕ್‌ ಫ್ರಂಟ್‌ ಎಂಬ ಮೈತ್ರಿಕೂಟ ರಚಿಸಿಕೊಂಡಿವೆ. ರಾಜಸ್ಥಾನ ಮತ್ತು ಕೇಂದ್ರದಲ್ಲಿ ಬಿಜೆಪಿಯನ್ನು ಸೋಲಿಸುವುದು ಈ ಮೈತ್ರಿಕೂಟದ ಗುರಿ ಎಂದು ಹೇಳಲಾಗಿದೆ.

ADVERTISEMENT

ಈ ಮೈತ್ರಿಕೂಟಕ್ಕೆ ಬಿಎಸ್‌ಪಿ ಸೇರಿಲ್ಲ. ಆ ಪಕ್ಷವು ಕಾಂಗ್ರೆಸ್‌ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಕಾಂಗ್ರೆಸ್‌ನ ರಾಜ್ಯಮಟ್ಟದ ನಾಯಕರು ಮೈತ್ರಿಕೂಟ ರಚನೆಗೆ ವಿರೋಧವಾಗಿದ್ಧಾರೆ. ಹಾಗಾಗಿ ಈ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡಿವೆ. ಕಾಂಗ್ರೆಸ್‌ ಜತೆಗಿನ ಬಿಎಸ್‌ಪಿಯ ಮೈತ್ರಿ ಮಾತುಕತೆ ಮುರಿದು ಬಿದ್ದರೆ ಬಿಎಸ್‌ಪಿಯನ್ನೂ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಬಹುದು ಎಂಬ ವಿಶ್ವಾಸವನ್ನು ಈ ಹೊಸ ಕೂಟ ಹೊಂದಿದೆ.

ಮಧ್ಯಪ್ರದೇಶದಲ್ಲಿ 28, ರಾಜಸ್ಥಾನದಲ್ಲಿ 17 ಮತ್ತು ಛತ್ತೀಸಗಡದಲ್ಲಿ 11 ಕ್ಷೇತ್ರಗಳನ್ನು ಕೊಡಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್‌ ಮುಂದೆ ಬಿಎಸ್‌ಪಿ ಇಟ್ಟಿದೆ. ಮಧ್ಯಪ್ರದೇಶದಲ್ಲಿ ಮಾತುಕತೆ ನಡೆಯುತ್ತಿದೆ. ಆದರೆ, ರಾಜಸ್ಥಾನದ ಮುಖಂಡರು ಮಾತುಕತೆಗೆ ಮುಂದಾಗಿಲ್ಲ.

ಈ ಎಲ್ಲ ಪಕ್ಷಗಳು ಜೈಪುರದಲ್ಲಿ ಇತ್ತೀಚೆಗೆ ರಾಜ್ಯಮಟ್ಟದ ಸಮಾವೇಶವೊಂದನ್ನು ನಡೆಸಿದ್ದವು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಇದನ್ನು ಉದ್ಘಾಟಿಸಿದ್ದರು. ರಾಜಸ್ಥಾನದಲ್ಲಿ ಸ್ಪರ್ಧಿಸಬಹುದಾದ 42 ಕ್ಷೇತ್ರಗಳನ್ನು ಸಿಪಿಐ ಮತ್ತು 35 ಕ್ಷೇತ್ರಗಳನ್ನು ಸಿಪಿಐ ಗುರುತಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.