ADVERTISEMENT

ಕೋಚಿಂಗ್‌ ಸೆಂಟರ್ ದುರಂತ: ಮೃತರ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪಿಸಲು ಎಂಸಿಡಿ ಆದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2024, 3:14 IST
Last Updated 2 ಆಗಸ್ಟ್ 2024, 3:14 IST
<div class="paragraphs"><p>ಶೆಲ್ಲಿ ಒಬೆರಾಯ್</p></div>

ಶೆಲ್ಲಿ ಒಬೆರಾಯ್

   

–ಪಿಟಿಐ ಚಿತ್ರ

ನವದೆಹಲಿ: ರಾಜೀಂದರ್ ನಗರದಲ್ಲಿರುವ ‍‘ರಾವ್ಸ್‌ ಸ್ಟಡಿ ಸರ್ಕಲ್‌’ನ ನೆಲಮಹಡಿಗೆ ನೀರು ನುಗ್ಗಿ ಮೃತಪಟ್ಟ ಮೂವರು ಐಎಎಸ್‌ ಆಕಾಂಕ್ಷಿಗಳ ಹೆಸರಿನಲ್ಲಿ 4 ಗ್ರಂಥಾಲಯಗಳನ್ನು ಸ್ಥಾಪಿಸುವಂತೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಮೇಯರ್ ಶೆಲ್ಲಿ ಒಬೆರಾಯ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ADVERTISEMENT

ಹೆಸರಿನಲ್ಲಿ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ವತಿಯಿಂದ ಮೃತ ಐಎಎಸ್‌ ಆಕಾಂಕ್ಷಿಗಳ ಹೆಸರಿನಲ್ಲಿ ರಾಜೀಂದರ್ ನಗರ, ಮುಖರ್ಜಿ ನಗರ, ಪಟೇಲ್ ನಗರ ಮತ್ತು ಬೆರ್ ಸರಾಯಿ ಪ್ರದೇಶಗಳಲ್ಲಿ ನಾಲ್ಕು ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಒಬೆರಾಯ್ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಬಹಳಷ್ಟು ವಿದ್ಯಾರ್ಥಿಗಳು ಖಾಸಗಿ ಗ್ರಂಥಾಲಯಗಳಲ್ಲಿ ವಿಧಿಸುವ ಸದಸ್ಯತ್ವ ಶುಲ್ಕವನ್ನು ಭರಿಸಲಾಗದೆ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಕಾರಣದಿಂದ ದೆಹಲಿಯಾದ್ಯಂತ ಸಾರ್ವಜನಿಕ ಗ್ರಂಥಾಲಯಗಳ ಕೊರತೆ ನಿವಾರಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಜೆಟ್ ನಿಬಂಧನೆಗಳ ಹೊರತಾಗಿಯೂ ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ಮಿಸಲು ಮೇಯರ್ ಅವರು ವಿವೇಚನಾ ಅಧಿಕಾರ ಬಳಸಿ ಅನುದಾನ ಬಿಡುಗಡೆ ಮಾಡಬಹುದು ಎಂದು ತಿಳಿದುಬಂದಿದೆ. ‌

ದೆಹಲಿ ಮಹಾನಗರ ಪಾಲಿಕೆ ಆಯುಕ್ತ ಅಶ್ವನಿ ಕುಮಾರ್ ಅವರು ವಿದ್ಯಾರ್ಥಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿ ಕುಂದುಕೊರತೆಗಳ ಕುರಿತು ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ಈಚೆಗೆ ನಡೆದ ಕೋಚಿಂಗ್‌ ಸೆಂಟರ್ ದುರಂತದಲ್ಲಿ ಕೇರಳದ ಎರ್ನಾಕುಳಂ ಜಿಲ್ಲೆಯ ನವೀನ್‌ ಡೆಲ್ವಿನ್ (29), ತೆಲಂಗಾಣದಲ್ಲಿ ನೆಲೆಸಿರುವ ಬಿಹಾರದ ಔರಂಗಾಬಾದ್‌ನ ತಾನ್ಯಾ ಸೋನಿ (21) ಮತ್ತು ಉತ್ತರ ಪ್ರದೇಶದ ಶ್ರೇಯಾ ಯಾದವ್‌ ಮೃತಪಟ್ಟಿದ್ದರು. ಈ ಮೂವರೂ ನಾಗರಿಕ ಸೇವಾ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು.

ತಾನ್ಯಾ ಅವರು ದೆಹಲಿ ವಿಶ್ವವಿದ್ಯಾಲಯದ ಮಹಾರಾಜಾ ಅಗ್ರಸೇನ್‌ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದು, ಒಂದೂವರೆ ತಿಂಗಳ ಹಿಂದೆಯಷ್ಟೇ ರಾವ್ಸ್ ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಿದ್ದರು.

ನವೀನ್‌ ಅವರು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಾಡುತ್ತಿದ್ದು, ಕೋಚಿಂಗ್‌ ಸೆಂಟರ್‌ನಲ್ಲಿ ಎಂಟು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದಾರೆ. ಬಿಎಸ್‌ಸಿ (ಕೃಷಿ) ವ್ಯಾಸಂಗ ಮಾಡಿರುವ ಶ್ರೇಯಾ, ಎರಡು ತಿಂಗಳ ಹಿಂದೆ ತರಬೇತಿ ಕೇಂದ್ರಕ್ಕೆ ಸೇರಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.