ADVERTISEMENT

ರಜನೀಕಾಂತ್‌ ‘ಹಳೆ ವಿದ್ಯಾರ್ಥಿ’ ಹೇಳಿಕೆ: ಸಚಿವ ಮುರುಗನ್ ಕಿಡಿ

ಶನಿವಾರ ಮನಸ್ತಾಪ, ಸೋಮವಾರ ರಾಜಿಯಾದ ನಟ ಹಾಗೂ ಸಚಿವ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 14:14 IST
Last Updated 26 ಆಗಸ್ಟ್ 2024, 14:14 IST
ರಜನೀಕಾಂತ್‌
ರಜನೀಕಾಂತ್‌   

ಚೆನ್ನೈ:  ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಡಿಎಂಕೆ ಹಿರಿಯ ನಾಯಕರನ್ನು ನಿಭಾಯಿಸುವ ವಿಧಾನಕ್ಕೆ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್‌ ಅವರು  ‘ಸಲ್ಯೂಟ್‌’ ಹೇಳಿದ್ದಾರೆ.

ರಜನೀಕಾಂತ್‌  ಅವರು ಪಕ್ಷದ ಹಿರಿಯ ಹಿರಿಯ ನಾಯಕರನ್ನು  ‘ಹಿರಿಯ ವಿದ್ಯಾರ್ಥಿ’ ಗಳೆಂದು ಕರೆದಿದ್ದು, ‘ಉತ್ತೀರ್ಣರಾಗಲು ಅಗತ್ಯವಿರುವ ಅಂಕ ಪಡೆದರೂ ತರಗತಿಯನ್ನು ಬಿಟ್ಟು ಹೋಗಲು ನಿರಾಕರಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಹೇಳಿಕೆಯು ರಜನೀಕಾಂತ್‌ ಮತ್ತು ಜಲಸಂಪನ್ಮೂಲ ಸಚಿವ ದುರೈ ಮುರುಗನ್‌ ಅವರೊಂದಿಗಿನ ಮನಸ್ತಾಪಕ್ಕೆ ಮತ್ತಷ್ಟು ಇಂಬುನೀಡಿದೆ.

ADVERTISEMENT

ಡಿಎಂಕೆ ನಾಯಕ ಎಂ.ಕರುಣಾನಿಧಿ ಅವರ ಕುರಿತ ಪುಸ್ತಕ ಬಿಡುಗಡೆ ಮಾಡಿ ಶನಿವಾರ ಮಾತನಾಡಿದ ರಜನೀಕಾಂತ್‌, ‘ಹೊಸ ವಿದ್ಯಾರ್ಥಿಗಳನ್ನು ನಿಭಾಯಿಸುವುದು ಶಿಕ್ಷಕರಿಗೆ ಸುಲಭ. ಆದರೆ ಹಳೆಯ ವಿದ್ಯಾರ್ಥಿಗಳನ್ನು ನಿಭಾಯಿಸುವುದೇ ಸವಾಲು. ಇಲ್ಲಿ ಎಲ್ಲ ಹಳೆಯ ವಿದ್ಯಾರ್ಥಿಗಳೂ ರ‍್ಯಾಂಕ್‌ ಪಡೆದಿದ್ದು, ತರಗತಿ ಬಿಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. ದುರೈ ಮುರುಗನ್‌ ಅವರನ್ನು ನಿಭಾಯಿಸುವುದು ಕರುಣಾನಿಧಿ ಅವರಿಗೂ ಕಷ್ಟವಾಗಿತ್ತು. ಸ್ಟಾಲಿನ್‌ ಸರ್... ನಿಮಗೆ ನಮನ’ ಎಂದು ಹೇಳಿದ್ದರು. 

ಡಿಎಂಕೆ ಹಿರಿಯ ನಾಯಕರು ಪಕ್ಷವನ್ನು ಮುನ್ನಡೆಸಲು ಯುವಕರಿಗೆ ಅವಕಾಶ ನೀಡುತ್ತಿಲ್ಲ ಎಂದು  ಪರೋಕ್ಷವಾಗಿ ಹೇಳಿದ್ದಾರೆ ಎಂದು ರಜನೀಕಾಂತ್‌ ಅವರ ಹೇಳಿಕೆಯನ್ನು ಅರ್ಥೈಸಲಾಗಿದೆ.

ಈ ಬೆನ್ನಲ್ಲೇ ದುರೈ ಮುರುಗನ್‌ ಅವರು ರಜನೀಕಾಂತ್‌ ವಿರುದ್ಧ ವಾಗ್ದಾಳಿ ನಡೆಸಿ, ‘ಕೆಲ ನಟರು ಹಲ್ಲುದುರಿದ ನಂತರವೂ ಥಳುಕು–ಬಳುಕಿನ ನಗರದಲ್ಲಿ ಪ್ರಾಬಲ್ಯ ಮುಂದುವರಿಸುತ್ತಾರೆ’ ಎಂದು ತಿರುಗೇಟು ನೀಡಿದ್ದಾರೆ.

ಸೋಮವಾರ ಉಭಯ ನಾಯಕರು ರಾಜಿ ಆಗಿದ್ದಾರೆ. ರಜನೀಕಾಂತ್‌ ಅವರು, ‘ದುರೈ ಮುರುಗನ್‌ ನನ್ನ ದೀರ್ಘಕಾಲದ ಸ್ನೇಹಿತ. ನಮ್ಮಿಬ್ಬರ ಸಂಬಂಧ ಹೀಗೆಯೇ ಮುಂದುವರಿಯಲಿದೆ’ ಎಂದು ಹೇಳಿದ್ದರೆ, ಇತ್ತ ಮುರುಗನ್‌ ಅವರು, ‘ನಾವಿಬ್ಬರೂ ಸ್ನೇಹಿತರು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.