ಚೆನ್ನೈ: ಇತ್ತೀಚೆಗೆ ತಮಿಳಿನ ಖ್ಯಾತ ನಟ, ರಾಜಕಾರಣಿ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶ ಯಶಸ್ವಿಯಾದ ಬೆನ್ನಲ್ಲೇ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಳಪತಿ ವಿಜಯ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸಮಾವೇಶದಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ವಿಜಯ್ ನೀಡಿದ್ದ ಹೇಳಿಕೆಗಳ ಕುರಿತು ರಜನಿಕಾಂತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ವಿಜಯ್ ಅವರಿಗೆ ಶುಭಕೋರಿದ್ದಾರೆ.
ಇದೇ ವೇಳೆ ದೀಪಾವಳಿ ಹಬ್ಬಕ್ಕೆ ರಜನಿಕಾಂತ್ ಅವರ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.
ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ವಿಜಯ್ ಅವರು ತನ್ನ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶವನ್ನು ಭಾನುವಾರ ವಿಕ್ರವಾಂಡಿಯಲ್ಲಿ ಆಯೋಜಿಸಿದ್ದರು.
ಚೆನ್ನೈನಿಂದ 150 ಕಿ.ಮೀ ದೂರದಲ್ಲಿರುವ ವಿಕ್ರವಾಂಡಿಯಲ್ಲಿ ನಡೆದ ಸಮಾವೇಶಕ್ಕೆ ತಮಿಳುನಾಡು ಮತ್ತು ನೆರೆ ರಾಜ್ಯಗಳಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಮತ್ತು ಅಭಿಮಾನಿಗಳು ಬಂದಿದ್ದರು ಎಂದು ತಿಳಿದು ಬಂದಿದೆ.
ಟಿವಿಕೆ ಪಕ್ಷದ ಅನಾವರಣದ ಜೊತೆ ವಿಜಯ್ ಚಿತ್ರರಂಗಕ್ಕೂ ಗುಡ್ಬೈ ಹೇಳುತ್ತಿದ್ದಾರೆ. ಈಗಾಗಲೇ ಚಾಲ್ತಿಯಲ್ಲಿರುವ ವಿಜಯ್ 69 ಸಿನಿಮಾ ಒಂದನ್ನು ಹೊರತುಪಡಿಸಿ ಇನ್ಮುಂದೆ ಅವರು ಮತ್ಯಾವ ಪಾತ್ರಕ್ಕೂ ಬಣ್ಣ ಹಚ್ಚುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.