ADVERTISEMENT

ಪೆರಿಯಾರ್‌ ಕುರಿತಾದ ಹೇಳಿಕೆ: ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದ ರಜನಿಕಾಂತ್‌

ಪಿಟಿಐ
Published 21 ಜನವರಿ 2020, 20:47 IST
Last Updated 21 ಜನವರಿ 2020, 20:47 IST
   

ಚೆನ್ನೈ: ಸಮಾಜ ಸುಧಾರಕ ಪೆರಿಯಾರ್‌ ಅವರ ಕುರಿತು ನೀಡಿದ ಹೇಳಿಕೆ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸುವುದಿಲ್ಲ ಮತ್ತು ಕ್ಷಮೆಯಾಚಿಸುವುದಿಲ್ಲ ಎಂದು ನಟ ರಜನಿಕಾಂತ್‌ ಮಂಗಳವಾರ ಹೇಳಿದ್ದಾರೆ.

ಜ.14ರಂದು ತಮಿಳು ನಿಯತಕಾಲಿಕೆ ‘ತುಘಲಕ್‌’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಜನಿ, ‘1971ರಲ್ಲಿ ಸೇಲಂನಲ್ಲಿ ಪೆರಿಯಾರ್‌ ಇ.ವಿ. ರಾಮಸ್ವಾಮಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಚಪ್ಪಲಿ ಹಾರ ಹಾಕಿದ್ದ ಶ್ರೀರಾಮಚಂದ್ರ ಮತ್ತು ಸೀತೆಯ ಬೆತ್ತಲೆ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು’ ಎಂದು ಹೇಳಿದ್ದರು.

ಈ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ರಜನಿ ಕ್ಷಮೆಯಾಚಿಸಬೇಕು ಎಂದು ದ್ರಾವಿಡಾರ್‌ ವಿದುಥಲೈ ಕಳಗಂ ಸಂಘಟನೆ (ಡಿವಿಕೆ) ಆಗ್ರಹಿಸಿತ್ತು. ಜತೆಗೆ, ಸುಳ್ಳು ಹೇಳಿಕೆ ನೀಡಿರುವ ರಜನಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪೊಲೀಸರಿಗೂ ದೂರು ನೀಡಿತ್ತು.

ADVERTISEMENT

ತಮ್ಮ ಹೇಳಿಕೆಯನ್ನು ಸಮರ್ಥಿಸಲು ನಿಯತಕಾಲಿಕೆ ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಮತ್ತು ಚಿತ್ರಗಳನ್ನು ತೋರಿಸಿದ ರಜನಿ, ‘ವಾಸ್ತವ ಸಂಗತಿಯನ್ನೇ ಹೇಳಿದ್ದೇನೆ. ನಡೆಯದ ಘಟನೆಯನ್ನು ಹೇಳಿದ್ದೇನೆ ಎಂದು ವಿವಾದ ಸೃಷ್ಟಿಸಲಾಗಿದೆ. ಆದರೆ, ನಾನು ನಡೆಯದಿರುವುದನ್ನು ಹೇಳಿಲ್ಲ. ನಾನು ಕೇಳಿಸಿಕೊಂಡಿದ್ದನ್ನು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿರುವುದನ್ನು ಮಾತ್ರ ಹೇಳಿದ್ದೇನೆ. ಹೀಗಾಗಿ, ಕ್ಷಮೆಯಾಚಿಸುವುದಿಲ್ಲ’ ಎಂದಿದ್ದಾರೆ.

ಏನಿದು ವಿವಾದ?

ಜನವರಿ 14ರಂದು ರಜನಿಕಾಂತ್‌ ‘ತುಘಲಕ್‌‘ ನಿಯಕತಾಲಿಕೆಯ 50ನೇ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಸೇಲಂನಲ್ಲಿ1971ರಲ್ಲಿ ಮೌಢ್ಯ ನಿರ್ಮೂಲನೆಗಾಗಿ ಪೆರಿಯಾರ್‌ ಅವರು ಸೀತೆ ಮತ್ತು ರಾಮರ ನಗ್ನ ಮೂರ್ತಿಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು. ಅಂದಿನ ಘಟನೆಯನ್ನು ಯಾವ ಪತ್ರಿಕೆಗಳೂವರದಿ ಮಾಡಲಿಲ್ಲ ಎಂದು ರಜನಿಕಾಂತ್‌ ಹೇಳಿದ್ದರು.

ತುಘಲಕ್ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ಚೋರಾಮಸ್ವಾಮಿಅವರು ಆ ಮೆರವಣಿಗೆವರದಿಯನ್ನು ಪ್ರಕಟಿಸಿದ್ದು ಮಾತ್ರವಲ್ಲದೇ, ಟೀಕಿಸಿದ್ದರು ಎಂದರು. ಆಗ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದು ಎಂ.ಕರುಣಾನಿಧಿ ಅವರು ಮುಖ್ಯಮಂತ್ರಿಯಾಗಿದ್ದರು. ಸುದ್ದಿ ಪ್ರಕಟಿಸಿ ಮತ್ತು ಟೀಕೆ ಮಾಡಿದಕ್ಕೆ ರಾಮಸ್ವಾಮಿ ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ವರದಿ ಪ್ರಕಟವಾಗಿದ್ದ ಎಲ್ಲಾ ಪ್ರತಿಗಳನ್ನು ಸರ್ಕಾರ ವಶಕ್ಕೆ ಪಡೆದಿತ್ತು. ಆದರೆ ರಾಮಸ್ವಾಮಿ ಮತ್ತೆ ಮರು ಮುದ್ರಣ ಮಾಡಿದಾಗ ಎಲ್ಲಾ ಪ್ರತಿಗಳು ಬಿಸಿ ಬಿಸಿ ಕೇಕ್‌ನಂತೆ ಮಾರಾಟವಾದವು ಎಂದು ರಜನಿಕಾಂತ್‌ ಹೇಳಿದ್ದರು.

ರಜನಿಕಾಂತ್‌ ನೀಡಿದ ಈ ಹೇಳಿಕೆ ತಮಿಳುನಾಡಿನಲ್ಲಿ ವಿವಾದದ ಸ್ವರೂಪ ಪಡೆದುಕೊಂಡಿದೆ.ತಮಿಳಿನ ಡಿವಿಕೆ (ದ್ರಾವಿಡ ವಿದುತಳೈ ಕಳಗಂ) ಸಂಘಟನೆ ರಜನಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ. ರಜನಿ ವಿರುದ್ಧ ಪ್ರತಿಭಟನೆ ನಡೆಸಿದ್ದುಅವರು ಬೇಷರತ್‌ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರಜನಿಕಾಂತ್‌, ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.