ಚೆನ್ನೈ: ತಮಿಳು ನಟ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಕುರಿತು ಗರಿಗೆದರಿದ್ದ ಕುತೂಹಲಕ್ಕೆ ತೆರೆಬಿದ್ದಿದೆ. ಹೊಸ ವರ್ಷದಲ್ಲಿ ರಾಜಕೀಯ ರಂಗಕ್ಕೆ ಅಡಿ ಇಡುವುದಾಗಿ ಅವರು ಘೋಷಿಸಿದ್ದಾರೆ.
‘2021ರ ಜನವರಿಯಲ್ಲಿ ಹೊಸ ಪಕ್ಷವನ್ನು ಆರಂಭಿಸಲಿದ್ದು, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ’ ಎಂದು ಗುರುವಾರ ಹೇಳಿದ್ದಾರೆ.
‘ಜನರ ಕಲ್ಯಾಣಕ್ಕಾಗಿ ಪ್ರಾಣವನ್ನೇ ಪಣಕ್ಕಿಡಲು ತಯಾರಿದ್ದೇನೆ. ಜನರ ಇಚ್ಛೆಯಂತೆಯೇ ರಾಜಕೀಯ ಪ್ರವೇಶಿಸುತ್ತಿದ್ದೇನೆ. ಜನರು ನಮ್ಮ ಪಕ್ಷದ ಬೆನ್ನಿಗೆ ನಿಲ್ಲಲಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಅಮೋಘ ಗೆಲುವು ದಾಖಲಿಸಲಿದ್ದೇವೆ’ ಎಂದು 70 ವರ್ಷ ವಯಸ್ಸಿನ ರಜನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ 2021ರ ಏಪ್ರಿಲ್–ಮೇ ತಿಂಗಳಲ್ಲಿ ನಡೆಯಲಿದೆ.
‘ಜನವರಿಯಲ್ಲಿ ಆಧ್ಯಾತ್ಮಿಕ ರಾಜಕಾರಣಕ್ಕೆ ಮುನ್ನುಡಿ ಬರೆಯಲಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಸ್ಮಯವೊಂದು ಜರುಗಲಿದೆ. ಪಕ್ಷ ಘೋಷಣೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಇದೇ 31ರಂದು ಬಹಿರಂಗಪಡಿಸಲಾಗುವುದು’ ಎಂದು ರಜನಿ ಟ್ವೀಟ್ ಮಾಡಿದ್ದರು.
ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘2021ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯ ಪಕ್ಷ ಘೋಷಿಸುವುದಾಗಿ 2017ರಲ್ಲೇ ತಿಳಿಸಿದ್ದೆ. ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲೂ ತೀರ್ಮಾನಿಸಿದ್ದೆ. ಕೊರೊನಾ ಕಾರಣದಿಂದಾಗಿ ಇದು ಸಾಧ್ಯವಾಗಲಿಲ್ಲ. 2016ರಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡ ನಂತರ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಪ್ರಯಾಣ ಮಾಡಬಾರದು ಎಂದೂ ಸಲಹೆ ನೀಡಿದ್ದರು. ಹೀಗಾಗಿ ರಾಜಕೀಯಕ್ಕೆ ಅಡಿ ಇಡುವ ನನ್ನ ಕನಸಿಗೆ ಅಲ್ಪ ಅಡ್ಡಿ ಎದುರಾಗಿತ್ತು’ ಎಂದರು.
‘ಈ ಹಿಂದೆ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಹೋಗಿದ್ದೆ. ಆಗ ತಮಿಳುನಾಡಿನ ಜನ ನನ್ನ ಚೇತರಿಕೆಗಾಗಿ ಹೋಮ, ಹವನಗಳನ್ನು ಮಾಡಿದ್ದರು. ಅವರ ಪ್ರಾರ್ಥನೆಯಿಂದಾಗಿ ನನಗೆ ಪುನರ್ಜನ್ಮ ಸಿಕ್ಕಿತ್ತು. ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಜನರಿಗಾಗಿ ಪ್ರಾಣ ತ್ಯಜಿಸಲೂ ಸಿದ್ಧನಿದ್ದೇನೆ. ರಾಜಕೀಯದಲ್ಲಿ ಬದಲಾವಣೆಯಾಗಬೇಕಿರುವುದು ತುಂಬಾ ಅವಶ್ಯ. ವ್ಯವಸ್ಥೆಯನ್ನು ಬದಲಿಸಲು ಇದು ಸಕಾಲ’ ಎಂದೂ ತಿಳಿಸಿದರು.
‘ರಾಜಕೀಯ ಇನಿಂಗ್ಸ್‌ನಲ್ಲಿ ನಾನು ಜಯಿಸಿದರೆ ಅದು ಜನರ ಗೆಲುವಾಗಲಿದೆ. ಸೋತರೂ ಅದರ ಶ್ರೇಯ ಜನರಿಗೆ ಸೇರಲಿದೆ. ಗಾಂಧಿಯ ಮಕ್ಕಳ್ ಇಯಕ್ಕಂ ಪಕ್ಷದ ಮುಖ್ಯಸ್ಥ ತಮಿಳರುವಿ ಮಣಿಯನ್ ಅವರು ಹೊಸ ಪಕ್ಷದ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ’ ಎಂದು ರಜನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.