ADVERTISEMENT

ಪ್ರಧಾನಿ ಮೋದಿಯವರು ರಾಜೀವ್ ಗಾಂಧಿಯಂತೆ ‘ಮಿಸ್ಟರ್ ಕ್ಲೀನ್’: ಅಜಿತ್‌ ಪವಾರ್‌

ಪಿಟಿಐ
Published 2 ಆಗಸ್ಟ್ 2023, 2:52 IST
Last Updated 2 ಆಗಸ್ಟ್ 2023, 2:52 IST
   

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಹಾಗೆ ‘ಮಿಸ್ಟರ್‌ ಕ್ಲೀನ್‘ ಎಂದು ಮಹಾರಾಷ್ಟ್ರದ ಉಪ‍ಮುಖ್ಯಮಂತ್ರಿ ಅಜಿತ್‌ ಪವಾರ್‌ ಹೊಗಳಿದ್ದಾರೆ.

‘ರಾಜೀವ್‌ ಗಾಂಧಿ ಅವರು ಮಿಸ್ಟರ್‌ ಕ್ಲೀನ್‌ ಎನ್ನುವ ಇಮೇಜ್ ಹೊಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅದೇ ಖ್ಯಾತಿ ಇದೆ‘ ಎಂದು ಅವರು ಹೇಳಿದ್ದಾರೆ.

‘ಕಾನೂನು ಸುವ್ಯವಸ್ಥೆ ಸರಿ ಇದ್ದರೆ, ಪ್ರಧಾನಮಂತ್ರಿ ಬಗ್ಗೆ ದೇಶದಲ್ಲಿ ಒಳ್ಳೆಯ ಅಭಿಪ್ರಾಯ ಇದೆ ಎಂದರ್ಥ. ಮಣಿಪುರದಲ್ಲಿ ನಡೆಯುತ್ತಿರುವುದನ್ನು ಯಾರೂ ಬೆಂಬಲಿಸುವುದಿಲ್ಲ. ಪ್ರಧಾನಮಂತ್ರಿಗೆ ಅಲ್ಲಿಯ ಸಮಸ್ಯೆಯ ಬಗ್ಗೆ ಅರಿವಿದೆ. ಸಿಜೆಐ ಕೂಡ ಅಲ್ಲಿಯ ಘಟನೆ ಬಗ್ಗೆ ಗಮನ ಸೆಳೆದಿದ್ದಾರೆ. ಅಲ್ಲಿ ಏನೇ ನಡೆದಿದ್ದರೂ ಅದನ್ನು ಖಂಡಿಸಿದ್ದಾರೆ. ಬೆತ್ತಲೆ ಪ್ರಕರಣದ ಆರೋ‍ಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ. ಪ್ರಧಾನಿ ಮೋದಿ 18 ಗಂಟೆ ಕೆಲಸ ಮಾಡುತ್ತಾರೆ’ ಎಂದು ಪವಾರ್‌ ಹೇಳಿದ್ದಾರೆ.

ADVERTISEMENT

‘ಇಡೀ ದೇಶ ದೀಪಾವಳಿಯನ್ನು ಮನೆಯಲ್ಲಿ ಆಚರಿಸಿದರೆ, ಪ್ರಧಾನಮಂತ್ರಿ ಮಾತ್ರ ಗಡಿಯಲ್ಲಿ ಸೈನಿಕರ ಜತೆ ಆಚರಿಸುತ್ತಾರೆ. ಕಳೆದ 9 ವರ್ಷಗಳಿಂದ ಅವರು ಹೀಗೆ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿಯಷ್ಟು ಜನಪ್ರಿಯ ನಾಯಕ ಮತ್ತೊಬ್ಬರಿಲ್ಲ. ಸತ್ಯ ಯಾವತ್ತೂ ಸತ್ಯವೇ. ನಮಗೆ ಬೇಕಾಗಿದ್ದು ಅಭಿವೃದ್ಧಿ ಮಾತ್ರ ’ ಎಂದು ಅಜಿತ್‌ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿಯವರ ಹಾಗೆ ಜನಪ್ರಿಯರಾಗಿರುವ ಮತ್ತೊಬ್ಬರು ದೇಶದಲ್ಲಿ ಯಾರೂ ಇಲ್ಲ. ಮೂಲಸೌಕರ್ಯದಲ್ಲಿ ಅವರು ಮಾಡಿರುವ ಕೆಲಸ ಒಮ್ಮೆ ನೋಡಿ. ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಸಿಗುತ್ತಿರುವ ಗೌರವ ನೋಡಿ. ಬೇರೆ ದೇಶಗಳಿಗೆ ಭೇಟಿ ನೀಡಿದಾಗ ಇಂದಿರಾ ಗಾಂಧಿಗೂ ಇದೇ ಥರದ ಗೌರವ ಸಿಗುತ್ತಿತ್ತು. ರಾಜೀವ್‌ ಗಾಂಧಿ ಅವರಿಗೆ ಮಿಸ್ಟರ್‌ ಕ್ಲೀನ್‌ ಎನ್ನುವ ಇಮೇಜ್‌ ಇತ್ತು. ಪ್ರಧಾನಿ ನರೇಂದ್ರ ಮೋದಿಯವರಿಂದ ನಾವು ಅದನ್ನು ನೋಡುತ್ತಿದ್ದೇವೆ’ ಎಂದು ಅಜಿತ್‌ ಪವಾರ್ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಎನ್‌ಸಿಪಿಯಿಂದ ಸಿಡಿದು ಬಿಜೆಪಿ–ಶಿವಸೇನಾ ನೇತೃತ್ವದ ಸರ್ಕಾರವನ್ನು ಬೆಂಬಲಿಸಿ ಉಪ ಮುಖ್ಯಮಂತ್ರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.