ADVERTISEMENT

ರಾಜ್‌ಕೋಟ್ ಅಗ್ನಿ ದುರಂತ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಗುಜರಾತ್ ಹೈಕೋರ್ಟ್

ಪಿಟಿಐ
Published 26 ಮೇ 2024, 7:51 IST
Last Updated 26 ಮೇ 2024, 7:51 IST
<div class="paragraphs"><p>ಅಗ್ನಿ ಅನಾಹುತ ನಡೆದ ರಾಜ್‌ಕೋಟ್‌ನ ಮನರಂಜನಾ ಕೇಂದ್ರದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಭಾನುವಾರ ನಡೆಯಿತು. </p></div>

ಅಗ್ನಿ ಅನಾಹುತ ನಡೆದ ರಾಜ್‌ಕೋಟ್‌ನ ಮನರಂಜನಾ ಕೇಂದ್ರದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಭಾನುವಾರ ನಡೆಯಿತು.

   

–ಪಿಟಿಐ ಚಿತ್ರ

ಅಹಮದಾಬಾದ್: ರಾಜ್‌ಕೋಟ್‌ನ ಮನರಂಜನಾ ಕೇಂದ್ರ ‘ಟಿಆರ್‌ಪಿ ಗೇಮ್‌ ಜೋನ್‌’ನಲ್ಲಿ ನಡೆದ ಅಗ್ನಿ ಅನಾಹುತದ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗಿರುವ ಗುಜರಾತ್‌ ಹೈಕೋರ್ಟ್‌ನ ವಿಶೇಷ ಪೀಠವು, ಈ ದುರಂತಕ್ಕೆ ಮನುಷ್ಯನೇ ಕಾರಣ ಎಂಬುದು ಮೇಲ್ನೋಟಕ್ಕೆ ಅನ್ನಿಸುತ್ತಿದೆ ಎಂದು ಹೇಳಿದೆ. ಈ ದುರ್ಘಟನೆಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಇಂತಹ ಮನರಂಜನಾ ಕೇಂದ್ರಗಳು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆಯದೆಯೇ ತಲೆ ಎತ್ತಿವೆ ಎಂದು ನ್ಯಾಯಮೂರ್ತಿಗಳಾದ ಬಿರೇನ್ ವೈಷ್ಣವ್ ಮತ್ತು ದೇವನ್ ದೇಸಾಯಿ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.

ಯಾವ ಕಾನೂನಿನ ಅಡಿಯಲ್ಲಿ ಅಧಿಕಾರಿಗಳು ಈ ಬಗೆಯ ಮನರಂಜನಾ ಘಟಕಗಳ ಸ್ಥಾಪನೆಗೆ ಅಥವಾ ಅವುಗಳ ಕಾರ್ಯಾಚರಣೆಗೆ ಅನುಮತಿ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದು ವಿಚಾರಣೆಗೆ ಹಾಜರಾಗುವಂತೆ ಅಹಮದಾಬಾದ್, ವಡೋದರಾ, ಸೂರತ್, ರಾಜ್‌ಕೋಟ್‌ನ ಸ್ಥಳೀಯ ಆಡಳಿತ ಸಂಸ್ಥೆಗಳ ವಕೀಲರಿಗೆ ಪೀಠವು ಸೂಚಿಸಿದೆ. ವಿಚಾರಣೆಯನ್ನು ಸೋಮವಾರಕ್ಕೆ ನಿಗದಿ ಮಾಡಲಾಗಿದೆ.

12 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ಕು ಮಕ್ಕಳು ಕೂಡ ಮೃತರಲ್ಲಿ ಸೇರಿದ್ದಾರೆ. ಮನರಂಜನಾ ಕೇಂದ್ರಕ್ಕೆ ಹಾಗೂ ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ‍ಪಟೇಲ್ ಅವರು ಭಾನುವಾರ ಬೆಳಿಗ್ಗೆ ಭೇಟಿ ನೀಡಿದರು.

‘ಈ ಮನರಂಜನಾ ಕೇಂದ್ರವು ನಿಯಮಗಳಲ್ಲಿನ ಲೋಪವನ್ನು ದುರ್ಬಳಕೆ ಮಾಡಿಕೊಂಡಿತ್ತು ಎನ್ನುವ ವರದಿಗಳನ್ನು ಓದಿ ನಮಗೆ ಆಘಾತವಾಗಿದೆ. ಪತ್ರಿಕೆಗಳು ಹೇಳಿರುವಂತೆ, ಇಂತಹ ಮನರಂಜನಾ ಕೇಂದ್ರಗಳು ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆಯದೆಯೇ ತಲೆಎತ್ತಿವೆ’ ಎಂದು ಪೀಠವು ಹೇಳಿದೆ.

ನಿರಾಕ್ಷೇಪಣಾ ಪತ್ರ, ನಿರ್ಮಾಣಕ್ಕೆ ಅನುಮತಿ ಸೇರಿದಂತೆ ಕೆಲವು ಅಗತ್ಯ ಅನುಮತಿಗಳನ್ನು ಪಡೆಯುವಲ್ಲಿ ಇರುವ ಅಡ್ಡಿಗಳನ್ನು ನಿವಾರಿಸಲು ಟಿಆರ್‌‍ಪಿ ಗೇಮ್‌ ಜೋನ್‌ನಲ್ಲಿ ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸಲಾಗಿತ್ತು ಎಂದು ಪೀಠವು ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಹೇಳಿದೆ.

ರಾಜ್‌ಕೋಟ್ ಮಾತ್ರವೇ ಅಲ್ಲ; ಇಂತಹ ಮನರಂಜನಾ ಕೇಂದ್ರಗಳು ಅಹಮದಾಬಾದ್ ನಗರದಲ್ಲಿಯೂ ಇವೆ. ಇವು ಸಾರ್ವಜನಿಕರ ಸುರಕ್ಷತೆಗೆ, ಅದರಲ್ಲೂ ಮುಖ್ಯವಾಗಿ ಮುಗ್ಧ ಮಕ್ಕಳ ಸುರಕ್ಷತೆಗೆ ಅಪಾಯ ಒಡ್ಡಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್ ಹೇಳಿದ್ದು...

* ಪತ್ರಿಕಾ ವರದಿಗಳಿಂದ ಪಡೆದ ಮಾಹಿತಿ ಪ್ರಕಾರ, ಇಂತಹ ಮನರಂಜನಾ ಕೇಂದ್ರಗಳನ್ನು ನಿರ್ಮಾಣ ಮಾಡಿ, ಅನುಮತಿ ಇಲ್ಲದೆಯೇ ಅವುಗಳನ್ನು ಬಳಕೆಗೆ ಮುಕ್ತವಾಗಿಸಲಾಗಿತ್ತು.

* ಮೇಲ್ನೋಟಕ್ಕೆ ಇಲ್ಲಿನ ದುರಂತಕ್ಕೆ ಮನುಷ್ಯನೇ ಕಾರಣ. ಇಲ್ಲಿ ಮುಗ್ಧ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಕುಟುಂಬಗಳು ದುಃಖದಲ್ಲಿವೆ.

* ಬೆಂಕಿ ಹೊತ್ತಿಕೊಳ್ಳಲು ಅನುವು ಮಾಡಿಕೊಡುವ ಪೆಟ್ರೋಲ್‌, ಫೈಬರ್ ಗ್ಲಾಸ್‌ ಶೀಟ್‌ಗಳನ್ನು ಟಿಆರ್‌ಪಿ ಗೇಮ್ ಜೋನ್‌ನಲ್ಲಿ ಇರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.