ADVERTISEMENT

ರಾಜ್‌ಕೋಟ್‌ ಅಗ್ನಿ ದುರಂತ | ಹಿರಿಯ ಅಧಿಕಾರಿಗಳ ವಿಚಾರಣೆಗೆ ಎಸ್‌ಐಟಿಗೆ ಸೂಚನೆ

ಸಭೆ ನಡೆಸಿದ ಗೃಹ ಸಚಿವ

ಪಿಟಿಐ
Published 29 ಮೇ 2024, 13:46 IST
Last Updated 29 ಮೇ 2024, 13:46 IST
ಅಗ್ನಿ ದುರಂತ
ಅಗ್ನಿ ದುರಂತ   

ಅಹಮದಾಬಾದ್: ರಾಜ್‌ಕೋಟ್‌ನ ಟಿಆರ್‌ಪಿ ಗೇಮ್‌ ಜೋನ್‌ನಲ್ಲಿ ನಡೆದ ಅಗ್ನಿ ಅನಾಹುತದ ತನಿಖೆಗೆ ನೇಮಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಕೂಡ ವಿಚಾರಣೆಗೆ ಗುರಿಪಡಿಸುವ ಅಧಿಕಾರ ನೀಡಲಾಗಿದೆ.

ಈ ನಡುವೆ, ದುರಂತದಲ್ಲಿ ಮೃತಪಟ್ಟ ಎಲ್ಲರ ಡಿಎನ್‌ಎ ಮಾದರಿಗಳು ಅವರ ಸಂಬಂಧಿಕರ ಡಿಎನ್‌ಎ ಮಾದರಿಗಳೊಂದಿಗೆ ಹೊಂದಿಕೆ ಆಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ ಗೃಹ ಸಚಿವ ಹರ್ಷ ಸಂಘವಿ ಅವರು ಎಸ್‌ಐಟಿ ಸದಸ್ಯರ ಜೊತೆ ಬುಧವಾರ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಎಸ್‌ಐಟಿ ಮುಖ್ಯಸ್ಥ ಸುಭಾಷ್ ತ್ರಿವೇದಿ, ‘ರಾಜ್‌ಕೋಟ್‌ ಮಹಾನಗರ ಪಾಲಿಕೆಯ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ, ವಿದ್ಯುತ್ ಕಂಪನಿಯ ಅಧಿಕಾರಿಗಳನ್ನು ಕೂಡ ತನಿಖೆಗೆ ಒಳಪಡಿಸುವಂತೆ ನಮಗೆ ಸೂಚನೆ ಸಿಕ್ಕಿದೆ. ಅವರು ತಪ್ಪು ಮಾಡಿದ್ದಾರೆ ಎಂದಾದರೆ ಕಠಿಣ ಕ್ರಮ ಜರುಗಿಸಲು ನಮಗೆ ಸೂಚನೆ ಬಂದಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಟಿಆರ್‌ಪಿ ಗೇಮ್‌ ಜೋನ್ ದುರಂತದ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ. ‘ಮುಂದಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳನ್ನು ಕೂಡ ವಿಚಾರಣೆಗೆ ಕರೆಸಲಾಗುತ್ತದೆ’ ಎಂದು ತ್ರಿವೇದಿ ಹೇಳಿದ್ದಾರೆ.

ಗೇಮ್‌ ಜೋನ್‌ ನಿರ್ವಾಹಕರು ಅನುಮತಿ ಇದ್ದ ಮಿತಿಗಿಂತ ಹೆಚ್ಚಾಗಿ, 30 ಲೀಟರ್‌ಗೂ ಹೆಚ್ಚು ‍‍ಪೆಟ್ರೋಲನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಹೀಗಾಗಿ ಪೆಟ್ರೋಲಿಯಂ ಕಾಯ್ದೆಯಲ್ಲಿ ಇರುವ ಕೆಲವು ಸೆಕ್ಷನ್ನುಗಳನ್ನು ಕೂಡ ಎಫ್‌ಐಆರ್‌ನಲ್ಲಿ ಸೇರಿಸಲಾಗುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.