ಗೋಬಿಚೆಟ್ಟಿಪಾಳಯಂ (ತಮಿಳುನಾಡು): ಕನ್ನಡ ಚಿತ್ರನಟ ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಪ್ರಕರಣದ ಎಲ್ಲ ಒಂಬತ್ತು ಆರೋಪಿಗಳನ್ನು ಇಲ್ಲಿನ ನ್ಯಾಯಾಲಯ ಖುಲಾಸೆ ಮಾಡಿದೆ. ಪ್ರಾಸಿಕ್ಯೂಷನ್ ವಾದ ದುರ್ಬಲವಾಗಿತ್ತು ಮತ್ತು ಬಹುತೇಕ ವಿಚಾರಗಳಲ್ಲಿ ಅದು ಎಡವಿದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕೆ. ಮಣಿ ಅಸಮಾಧಾನವನ್ನೂ ವ್ಯಕ್ತಪಡಿಸಿದರು.
ವೀರಪ್ಪನ್ ಮತ್ತು ಸೇತುಕುಳಿ ಗೋವಿಂದನ್ ಜತೆಗೆ ಈ ಒಂಬತ್ತು ಮಂದಿಗೆ ನಂಟು ಇತ್ತು ಎಂಬುದನ್ನು ತೋರಿಸಲು ಒಂದು ಅಣುವಿನಷ್ಟು ಪುರಾವೆ ಹಾಜರುಪಡಿಸುವುದೂ ಪ್ರಾಸಿಕ್ಯೂಷನ್‌ಗೆ ಸಾಧ್ಯ ವಾಗಿಲ್ಲ. ಹಾಗಾಗಿ ಅನುಮಾನದ ಲಾಭ ಆರೋಪಿಗಳಿಗೆ ದೊರೆಯುತ್ತದೆ. ಎಲ್ಲರನ್ನೂ ಆರೋಪಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಧೀಶರು ಪ್ರಕಟಿಸಿದರು.
ರಾಜ್‌ಕುಮಾರ್ ಮತ್ತು ಅವರ ಅಳಿಯ ಎಸ್.ಎ. ಗೋವಿಂದರಾಜ್, ಸಹಾಯಕ ನಿರ್ದೇಶಕ ನಾಗಪ್ಪ ಮರಡಗಿ ಮತ್ತು ಸಹಾಯಕ ನಾಗೇಶ್ ಅವರನ್ನು 2000ನೇ ಇಸವಿಯ ಜುಲೈ 30ರಂದು ಈರೋಡ್ ಜಿಲ್ಲೆಯ ತಾಳವಾಡಿ ಎಂಬಲ್ಲಿರುವ ರಾಜ್ ಅವರ ತೋಟದ ಮನೆಯಿಂದ ವೀರಪ್ಪನ್ ಅಪಹರಿಸಿದ್ದ. ಇದಾಗಿ 18 ವರ್ಷಗಳ ಬಳಿಕ ನ್ಯಾಯಾಲಯ ತೀರ್ಪು ಪ್ರಕಟವಾಗಿದೆ.
ಈ ಪ್ರಕರಣವನ್ನು ಕನ್ನಡದ ಸೂಪರ್‌ಸ್ಟಾರ್ ಒಬ್ಬರ ಅಪಹರಣ ಎಂಬಂತೆ ನೋಡದೆ ಭಾರತದ ಪ್ರಜೆಯೊಬ್ಬರ ಅಪಹರಣ ಎಂದೇ ನೋಡಬೇಕು ಎಂದು ನ್ಯಾಯಾಧೀಶರು ಹೇಳಿದರು.
ಅಪಹರಣವಾಗಿ 108 ದಿನಗಳ ಬಳಿಕ ರಾಜ್ ಅವರನ್ನು ವೀರಪ್ಪನ್ ಹಿಡಿತದಿಂದ ಬಿಡಿಸಲಾಯಿತು. ತಮಿಳು ಪತ್ರಿಕೆ ‘ನಕ್ಕೀರನ್’ ಸಂಪಾದಕ ಆರ್.ಆರ್. ಗೋಪಾಲ್ ಅವರು ಹಲವು ಬಾರಿ ಅರಣ್ಯಕ್ಕೆ ಹೋಗಿ ವೀರಪ್ಪನ್‌ನನ್ನು ಭೇಟಿಯಾಗಿ ಸಂಧಾನ ನಡೆಸಿದ್ದರು. ಗೋಪಾಲ್ ಅವರಿಗೆ ತಮಿಳು ಹೋರಾಟಗಾರ ಪಳ ನೆಡುಮಾರನ್ ಮತ್ತು ಇತರರು ಸಹಕರಿಸಿದ್ದರು.
ಈರೋಡ್ ಸಮೀಪದ ತೋಟದ ಮನೆಯಿಂದ ರಾಜ್‌ಕುಮಾರ್ ಅವರ ಅಪಹರಣದ ನಂತರದ ಮೂರು ತಿಂಗಳು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಭಾರಿ ತಲ್ಲಣ ಅನುಭವಿಸಿದ್ದವು.
ಬೆಂಗಳೂರಿನಲ್ಲಿ ಗಲಭೆ ಕೂಡ ನಡೆದಿತ್ತು. ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಮತ್ತು ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಟ್ಟಿದ್ದರು.
**
2000ನೇ ಇಸವಿ ಜುಲೈ 30ರಂದು ರಾಜ್ ಅಪಹರಣ
108 ದಿನಗಳ ಬಳಿಕ ವರನಟನ ಬಿಡುಗಡೆ
ಸಂಧಾನಕ್ಕಾಗಿ ಆರು ಬಾರಿ ಕಾಡಿಗೆ ಹೋಗಿದ್ದ ‘ನಕ್ಕೀರನ್’ ಗೋಪಾಲ್
2000ನೇ ಇಸವಿಯಲ್ಲಿ ಪ್ರಕರಣ ದಾಖಲು
2011ರಲ್ಲಿ ಸಿಬಿ–ಸಿಐಡಿಯಿಂದ ಆರೋಪಪಟ್ಟಿ ಸಲ್ಲಿಕೆ
ಎಂಟು ವರ್ಷಗಳ ವಿಚಾರಣೆ ಬಳಿಕ ಮಂಗಳವಾರ ತೀರ್ಪು ಪ್ರಕಟ
**
9 ಆರೋಪಿಗಳು
ಮಾರನ್, ಇನಿಯನ್, ಆಂಡ್ರಿಲ್, ಸತ್ಯ, ನಾಗರಾಜ್, ಪುಟ್ಟುಸ್ವಾಮಿ, ರಾಮ, ಬಸವಣ್ಣ ಮತ್ತು ಗೋವಿಂದರಾಜ್ ಅವರ ಮೇಲೆ ರಾಜ್‌ಕುಮಾರ್ ಅಪಹರಣಕ್ಕೆ ನೆರವಾದ ಆರೋಪ ಹೊರಿಸಲಾಗಿತ್ತು.
**
47 ಸಾಕ್ಷಿ,51 ದಾಖಲೆ
47 ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. 51 ದಾಖಲೆಗಳು ಮತ್ತು 32 ವಸ್ತುಗಳನ್ನು ಪುರಾವೆಯಾಗಿ ಸಲ್ಲಿಸಲಾಗಿತ್ತು. ಆದರೆ ಅಪಹರಣ ಕೃತ್ಯದಲ್ಲಿ ಈ ಒಂಬತ್ತು ಮಂದಿ ಭಾಗಿಯಾಗಿದ್ದರು ಎಂಬುದನ್ನು ತೋರಿಸುವ ಯಾವ ಸಾಕ್ಷ್ಯವೂ ಇಲ್ಲ ಎಂದು ನ್ಯಾಯಾಧೀಶರು ಹೇಳಿದರು.
**
ಪ್ರಾಸಿಕ್ಯೂಷನ್‌ಗೆ ತರಾಟೆ
ಹಲವು ವಿಚಾರಗಳಲ್ಲಿ ದಯನೀಯ ವೈಫಲ್ಯ ಕಂಡ ಪ್ರಾಸಿಕ್ಯೂಷನ್ ಅನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು. ರಾಜ್‌ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ಅವರು ಜೀವಿಸಿದ್ದಾಗ ಅವರ ಹೇಳಿಕೆ ಯಾಕೆ ಪಡೆದುಕೊಂಡಿಲ್ಲ ಎಂದು ಪ್ರಶ್ನಿಸಿದರು. ರಾಜ್ ಕುಟುಂಬದ ಸದಸ್ಯರು ಅಪಹರಣದ ಬಗ್ಗೆ ದೂರು ನೀಡಲು ಮುಂದೆ ಬಾರದಿರಲು ಕಾರಣವೇನು ಎಂದೂ ಕೇಳಿದರು.
‘ಪಾರ್ವತಮ್ಮ ಅವರು ದೂರು ಕೊಡಲಿಲ್ಲ ಎಂದಾದರೆ ಕುಟುಂಬದ ಇತರ ಸದಸ್ಯರಾದರೂ ದೂರು ಕೊಡಬಹುದಿತ್ತಲ್ಲವೇ? ರಾಜ್‌ಕುಮಾರ್ ಅವರ ಅಪಹರಣವಾದಾಗ ತಾವು ಮತ್ತು ಇತರ ಇಬ್ಬರು ಸ್ವಇಚ್ಛೆಯಿಂದಲೇ ಅವರ ಜತೆಗೆ ಕಾಡಿಗೆ ಹೋಗಿದ್ದಾಗಿ ಅಪಹರಣಕ್ಕೆ ಒಳಗಾದವರಲ್ಲಿ ಒಬ್ಬರಾದ ನಾಗಪ್ಪ ಹೇಳಿದ್ದರು. ಈ ಹೇಳಿಕೆಯನ್ನು ಹೇಗೆ ನೋಡಬೇಕು’ ಎಂದು ಪ್ರಶ್ನಿಸಿದರು.
ಸಂಧಾನಕಾರರಾಗಿದ್ದ ಗೋಪಾಲ್, ನೆಡುಮಾರನ್ ಮತ್ತು ಇತರರನ್ನುಪ್ರಕರಣದ ತನಿಖೆ ನಡೆಸಿದ್ದ ಸಿಬಿ–ಸಿಐಡಿ ತಂಡವು ಯಾಕೆ ವಿಚಾರಣೆಗೆ ಒಳಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಈ ಒಂಬತ್ತು ಮಂದಿಯ ಮೇಲೆ ಆರೋಪ ಇದ್ದರೆ ಅವರ ಮನೆಗಳನ್ನು ಯಾಕೆ ಶೋಧ ಮಾಡಿಲ್ಲ? ರಾಜ್‌ಕುಮಾರ್ ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಆದರೆ ರಾಜ್ ಅವರು ಕಾಡಿನಲ್ಲಿದ್ದಾಗ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಅವರು ಸಂತೋಷದಲ್ಲಿಯೇ ಇದ್ದುದಾಗಿ ಕಾಣಿಸುತ್ತದೆ. ತಾವು ಸಂತೋಷದಿಂದ ಇರುವುದಾಗಿ ರಾಜ್ ಅವರೇ ಹೇಳಿದ್ದರು’ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.