ADVERTISEMENT

ಕಾಶ್ಮೀರ | ಹೆಚ್ಚುತ್ತಿರುವ ಭಯೋತ್ಪಾದಕ ದಾಳಿ: ತುರ್ತು ಸಭೆ ನಡೆಸಿದ ರಾಜನಾಥ ಸಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2024, 7:22 IST
Last Updated 14 ಆಗಸ್ಟ್ 2024, 7:22 IST
<div class="paragraphs"><p>ರಾಜನಾಥ ಸಿಂಗ್</p></div>

ರಾಜನಾಥ ಸಿಂಗ್

   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್, ಸೇನಾ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್‌ ಉಪೇಂದ್ರ ದ್ವಿವೇದಿ, ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಮತ್ತು ಭದ್ರತಾ ಸಂಬಂಧಿತ ಏಜೆನ್ಸಿಗಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

ADVERTISEMENT

ಏತನ್ಮಧ್ಯೆ, ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ.

ಆಗಸ್ಟ್ 10ರಂದು ಅನಂತನಾಗ್‌ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಮತ್ತು ನಾಗರಿಕರೊಬ್ಬರು ಮೃತಪಟ್ಟಿದ್ದರು.

ಜುಲೈನಲ್ಲಿ ಜಮ್ಮು–ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಗಾಯಗೊಂಡಿದ್ದ 10 ಮಂದಿ ಯೋಧರ ಪೈಕಿ, ಐವರು ಮೃತಪಟ್ಟಿದ್ದರು. ದೋಡಾ ಮತ್ತು ಉಧಂಪುರ ಜಿಲ್ಲೆಗಳಲ್ಲಿ ಹೆಚ್ಚಿನ ಭಯೋತ್ಪಾದಕ ದಾಳಿ ಪ್ರಕರಣಗಳು ವರದಿಯಾಗಿದೆ.

ಈ ವರ್ಷ ಜುಲೈ 21ರವರೆಗೆ ನಡೆದ 11 ಭಯೋತ್ಪಾದಕ ದಾಳಿಗಳಲ್ಲಿ ನಾಗರಿಕರು, ಭದ್ರತಾ ಸಿಬ್ಬಂದಿ ಸೇರಿದಂತೆ 28 ಮಂದಿ ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯವು ಲೋಕಸಭೆಗೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.