ಚೆನ್ನೈ : ‘ಸಂಪುಟ ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವ ವಿಷಯದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ‘ದ್ವಿಮುಖ ನಿಲುವು’ ತಳೆದಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟೀಕಿಸಿದ್ದಾರೆ.
ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ 9 ವರ್ಷದ ಆಡಳಿತಾವಧಿ ಪೂರೈಸಿದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಇ.ಡಿಯು ಉದ್ಯೋಗಕ್ಕಾಗಿ ಹಣ ಪಡೆದ ಹಗರಣಲ್ಲಿ ಸೆಂಥಿಲ್ ಅವರನ್ನು ಬಂಧಿಸಿದೆ. ಆದರೆ, ಮುಖ್ಯಮಂತ್ರಿ ಕೇಂದ್ರ ತನಿಖಾ ಸಂಸ್ಥೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುತ್ತಿದ್ದಾರೆ ಎಂದರು.
ಸೆಂಥಿಲ್ ಬಾಲಾಜಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ಸೆಂಥಿಲ್ ಡಿ.ಎಂ.ಕೆ ಸೇರುವ ಮುನ್ನ ಸ್ಟಾಲಿನ್ ಅವರು ಭ್ರಷ್ಟಾಚಾರಿ ಎಂದೇ ಟೀಕಿಸಿ, ಬಂಧಿಸಲು ಒತ್ತಾಯಿಸಿದ್ದರು. ಈಗ ಅವರ ಬೇಡಿಕೆ ಈಡೇರಿದೆ. ಆದರೆ, ಅದನ್ನು ದ್ವೇಷ ಎನ್ನುತ್ತಾರೆ.ಇಂತಹ ದ್ವಿಮುಖ ಮನೋಭಾವವನ್ನು ಒಪ್ಪಲಾಗದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ.ಸೂರ್ಯಾ ಅವರನ್ನು ಬಂಧಿಸಿರುವುದನ್ನು ಅಸಾಂವಿಧಾನಿಕ ಎಂದು ಟೀಕಿಸಿದರು. ಟ್ವೀಟ್‌ಗೆ ಸಂಬಂಧಿಸಿದಂತೆ ಸೂರ್ಯ ಅವರನ್ನು ಬಂಧಿಸಲಾಗಿತ್ತು.
ರಷ್ಯಾದ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಹೆಸರಿನಲ್ಲಿಯೂ ಸ್ಟಾಲಿನ್ ಇದೆ. ಮುಖ್ಯಮಂತ್ರಿ ಅವರು ಅದನ್ನೇ ಗಂಭೀರವಾಗಿ ಪರಿಗಣಿಸಿ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ದೂಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.