ADVERTISEMENT

ಮಹಾರಾಷ್ಟ್ರ| ಹೆಚ್ಚುವರಿ ಅಭ್ಯರ್ಥಿಯ ಗೆಲ್ಲಿಸಿಕೊಂಡ ಬಿಜೆಪಿ: ಶಿವಸೇನೆಗೆ ಆಘಾತ

ಐಎಎನ್ಎಸ್
Published 11 ಜೂನ್ 2022, 5:41 IST
Last Updated 11 ಜೂನ್ 2022, 5:41 IST
   

ಮುಂಬೈ:ಮಹಾರಾಷ್ಟ್ರದಿಂದ ರಾಜ್ಯಸಭೆಯ 6 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ತನ್ನ ಹೆಚ್ಚುವರಿ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಳ್ಳುವ ಮೂಲಕ ‘ಮಹಾವಿಕಾಸ ಅಘಾಡಿ’ ಸರ್ಕಾರಕ್ಕೆ ಆಘಾತ ನೀಡಿದೆ.

ಮಹಾರಾಷ್ಟ್ರದಲ್ಲಿ 6 ಸ್ಥಾನಗಳಿಗೆ ಚುನಾವಣೆ ಎದುರಾಗಿತ್ತು. ಬಿಜೆಪಿಯಿಂದ ಮೂವರು, ಶಿವಸೇನೆಯಿಂದ ಇಬ್ಬರು, ಎನ್‌ಸಿಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಬ್ಬರು ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದರು.

ಆದರೆ, ವಿರೋಧ ಪಕ್ಷ ಬಿಜೆಪಿ ತನ್ನೆಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಅಭ್ಯರ್ಥಿಗಳಾದ ಪಿಯೂಷ್‌ ಗೊಯಲ್‌, ಅನಿಲ್‌ ಬೊಂಡೆ, ಧನಂಜಯ್‌ ಮಹಾದಿಕ್‌ ಅವರು ಗೆಲವು ಸಾಧಿಸಿದ್ದಾರೆ.

ADVERTISEMENT

ಇನ್ನುಳಿದ ಮೂರು ಸ್ಥಾನಗಳಲ್ಲಿ ಸಂಜಯ್‌ ರಾವುತ್‌ (ಶಿವಸೇನೆ), ಪ್ರಫುಲ್‌ ಪಟೇಲ್‌ (ಎನ್‌ಸಿಪಿ), ಇಮ್ರಾನ್‌ ಪ್ರತಾಪ್‌ಗಿರಿ (ಕಾಂಗ್ರೆಸ್‌) ಗೆದ್ದಿದ್ದಾರೆ. ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಚುನಾವಣಾ ಕಣಕ್ಕಿಳಿದಿದ್ದ ಶಿವಸೇನೆಯ ಎರಡನೇ ಅಭ್ಯರ್ಥಿ ಸಂಜಯ್‌ ಪವಾರ್‌ ಸೋಲುಂಡಿದ್ದಾರೆ. ಬೆಳಗ್ಗೆ 4 ಗಂಟೆಯಲ್ಲಿ ಪ್ರಕಟವಾದ ಅಂತಿಮ ಫಲಿತಾಂಶ ಮಹಾವಿಕಾಸ ಅಗಾಡಿ ಮೈತ್ರಿಕೂಟಕ್ಕೆ ಆಘಾತ ಉಂಟಾಗಿದೆ.

ಚುನಾವಣೆಯಲ್ಲಿ ಬಿಜೆಪಿ ಎರಡು, ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ತಲಾ ಒಂದೊಂದು ಸ್ಥಾನ ಗೆಲ್ಲುವುದು ನಿಶ್ಚಿತವಾಗಿತ್ತು. ಆದರೆ, 6 ಸ್ಥಾನಕ್ಕೆ ಬಿಜೆಪಿಯ ಮಹಾದಿಕ್‌ ಮತ್ತು ಶಿವಸೇನೆಯ ಪವಾರ್‌ ನಡುವೆ ಹಣಾಹಣಿ ಏರ್ಪಟ್ಟಿತ್ತು.

‘ನಾವು ಕೇವಲ ಸ್ಪರ್ಧೆಗಾಗಿ ಮಾತ್ರ ಕಣಕ್ಕಿಳಿದಿರಲಿಲ್ಲ, ಬದಲಿಗೆ ಗೆಲ್ಲಲೆಂದೇ ಸ್ಪರ್ಧಿಸಿದ್ದೆವು’ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.

‘ನಿರೀಕ್ಷಿಸಿದ ಮತಗಳು ನಮ್ಮ ಅಭ್ಯರ್ಥಿ ಪರವಾಗಿ ಬೀಳಲಿಲ್ಲ. ಕೆಲವು ಕಾರಣಗಳಿಂದಾಗಿ ಶಿವಸೇನಾ ಅಭ್ಯರ್ಥಿ ಸೋಲಬೇಕಾಯಿತು’ ಎಂದು ಶಿವಸೇನೆಯ ನಾಯಕ ರಾವುತ್ ಹೇಳಿದರು.

‘ಮೈತ್ರಿಕೂಟದ ಎಲ್ಲಾ ನಾಲ್ವರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ನಾವು ಭವಿಷ್ಯ ನುಡಿದಿದ್ದೇವೆ. ಸೋಲಿನ ಪರಾಮರ್ಶೆ ಖಂಡಿತ ಮಾಡುತ್ತೇವೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.